ಕುತೂಹಲ ಮೂಡಿಸಿದ ಡಿಕೆಶಿ-ಸತೀಶ್ ಜಾರಕಿಹೊಳಿ ಭೇಟಿ

ಬೆಂಗಳೂರು, ನ. 7: ‘ರಾಜಕೀಯ ಹಸ್ತಕ್ಷೇಪ ನಡೆದಿದೆ’ ಎಂದು ಮುನಿಸಿಕೊಂಡಿರುವ ಮಾತುಗಳ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಮಂಗಳವಾರ ಇಲ್ಲಿನ ಸತೀಶ್ ಜಾರಕಿಹೊಳಿ ಅವರ ಸರಕಾರಿ ನಿವಾಸಕ್ಕೆ ತೆರಳಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಲ ಹೊತ್ತು ಮಾತುಕತೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ‘ಸದ್ಯಕ್ಕೆ ಶಿವಕುಮಾರ್ ಅವರ ಜೊತೆ ಸಮಸ್ಯೆ ಇಲ್ಲ. ನಮ್ಮ ಜಿಲ್ಲೆಯಲ್ಲಿ ಒಂದಷ್ಟು ಸಮಸ್ಯೆ ಇದ್ದು, ಅವುಗಳನ್ನು ಬಗೆ ಹರಿಸಿಕೊಳ್ಳುತ್ತೇವೆ. ಇನ್ನೂ, ನಾನು ಕೆಪಿಸಿಸಿ ಅಧ್ಯಕ್ಷರ ಸ್ಪರ್ಧೆಯಲ್ಲಿಲ್ಲ. ಸದ್ಯ ಇರುವ ಜವಾಬ್ದಾರಿ ಸಾಕಾಗಿದೆ. ಮುಂದೆ ದೊಡ್ಡ ಜವಾಬ್ದಾರಿ ನೋಡೋಣ ಎಂದು ನುಡಿದರು.
ಬೆಳಗಾವಿ ರಾಜಕೀಯ ವಿಚಾರದಲ್ಲಿ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಅಸಮಾಧಾನ ಸ್ಫೋಟಗೊಂಡಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು. ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿರುವುದು, ವರ್ಗಾವಣೆ ಸೇರಿದಂತೆ ಇತರ ವಿಚಾರಗಳಲ್ಲಿ ಮೂಗು ತೂರಿಸುವುದರಿಂದ ಸಮಸ್ಯೆ ಬಿಗಡಾಯಿಸಿತ್ತು ಎನ್ನಲಾಗಿದೆ.





