ಬೆಂಗಳೂರು | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಆರಂಭ

ಬೆಂಗಳೂರು, ಆ.11 : ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ಆಯೋಗ ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ, ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸೋಮವಾರ ಅನಿರ್ಧಿಷ್ಟಾವಧಿ-ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.
ಈ ವೇಳೆ ಮಾತನಾಡಿದ ಹಿರಿಯ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ‘ಒಳಮೀಸಲಾತಿಗೆ ಸಂಬಂಧಿಸಿದ ನ್ಯಾ.ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯ ಸಾಧಕ-ಬಾಧಕಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅಧಿಕೃತವಲ್ಲ. ವರದಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅವುಗಳನ್ನು ಹೊಲೆಯ-ಮಾದಿಗ ಸಮುದಾಯದ ಮುಖಂಡರು ಚರ್ಚಿಸಬೇಕು. ನಮಗೆಲ್ಲಾ ಒಪ್ಪಿತ ವರದಿಯನ್ನು ಜಾರಿ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಬೇಕು’ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರದಾನ ಸಂಚಾಲಕ ಬಸವರಾಜ ಕೌತಾಳ್ ಮಾತನಾಡಿ, ‘ಒಳ ಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರಕಾರಕ್ಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಧಿಕಾರಕ್ಕೆ ಬಂದ ಎಲ್ಲಾ ಸರಕಾರಗಳು ನೊಂದ ಜನರಿಗೆ ಅನ್ಯಾಯ ಎಸಗಿವೆ. 35 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ನ್ಯಾ.ನಾಗಮೋಹನ್‍ದಾಸ್ ಆಯೋಗದ ಸಮೀಕ್ಷೆ ವರದಿಯು ವೈಜ್ಞಾನಿಕವಾಗಿದ್ದು, ಎಲ್ಲ ದತ್ತಾಂಶಗಳನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು.
ಅಧಿವೇಶನದಲ್ಲಿಯೇ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸಬೇಕು. ಬದಲಿಗೆ ಮತ್ತೊಂದು ಸಂಪುಟ ಉಪಸಮಿತಿ ರಚನೆ ಅಥವಾ ತಜ್ಞರ ಸಲಹೆ ನೆಪದಲ್ಲಿ ಮುಂದೂಡಬಾರದು. ಆ.16ರಂದು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿಯೇ ಚರ್ಚಿಸಿ, ಒಳಮೀಸಲಾತಿ ಜಾರಿ ತೀರ್ಮಾನ ಮಾಡಬೇಕು. ಒಳಮೀಸಲಾತಿ ಹೋರಾಟಗಾರರ ಮೇಲಿದ್ದ ಎಲ್ಲ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಹೋರಾಟಗಾರ ಎಸ್.ಮಾರೆಪ್ಪ, ಪ್ರೊ.ದೊರೆರಾಜು, ಕೇಶವಮೂರ್ತಿ, ಹೆಣ್ಣೂರು ಶ್ರೀನಿವಾಸ್, ಡಿ.ಟಿ. ವೆಂಕಟೇಶ್, ಉಮಾದೇವಿ, ಸಿದ್ದಲಿಂಗಯ್ಯ ಕಮಲಾನಗರ, ಶಿವಲಿಂಗಮ್, ಭೀಮನಕೆರೆ ಶಿವಮೂರ್ತಿ, ಶಿವಲಿಂಗಣ್ಣ, ಪಾರ್ತಿಭನ್, ಮಂಜು, ಡಾ.ಹುಲಿಕುಂಟೆ ಮೂರ್ತಿ, ಮುತ್ತುರಾಜ್, ಸಣ್ಣ ಮಾರೆಪ್ಪ, ಶಿವರಾಯ ಅಕ್ಕರಕಿ, ಕರಿಯಪ್ಪ ಗುಡಿಮನಿ, ಜೆ.ಬಿ.ರಾಜು, ಚಾವಡಿ ಲೋಕೇಶ್, ನರಸಿಂಹಮೂರ್ತಿ, ಓಬಳೇಶ್ ಮತ್ತಿತರರು ಹಾಜರಿದ್ದರು.
‘ಜ್ಞಾನ ಪ್ರಕಾಶ ಸ್ವಾಮೀಜಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸುಟ್ಟಿದ್ದು ಸರಿಯಲ್ಲ. ಆ ಮೂಲಕ ಅವರು ಒಂದೂವರೆ ಕೋಟಿ ಜನಸಂಖ್ಯೆಯ ಬದುಕನ್ನು ಸುಡಲು ಹೊರಟಿದ್ದಾರೆ. ಒಳ ಮೀಸಲಾತಿಯ ಹಿಂದಿನ ಹೋರಾಟದಲ್ಲಿ ಅವರು ನಮ್ಮೊಂದಿಗೆ ಇದ್ದರು. ಆದಿ ಕರ್ನಾಟಕ-ಆದಿ ದ್ರಾವಿಡ ವಿವಾದವನ್ನು ನಾವು ಮಾತನಾಡುವುದು ಸರಿಯಲ್ಲ. ಯಾವ ಜಾತಿ ಯಾವ ಗುಂಪಿನಲ್ಲಿ ಇರಬೇಕು ಎಂಬುದನ್ನು ಅದೇ ಸಮುದಾಯ ನಿರ್ಧರಿಸಬೇಕು’
-ಅಂಬಣ್ಣ ಅರೋಲಿಕರ್, ಒಳಮೀಸಲಾತಿ ಹೋರಾಟಗಾರ







