ʼಪರಿಶಿಷ್ಟರ ಒಳಮೀಸಲಾತಿʼ : ಹೋರಾಟಗಾರರಿಂದ ಫ್ರೀಡಂ ಪಾರ್ಕ್ ನಲ್ಲಿ ಸಂಭ್ರಮಾಚರಣೆ

ಬೆಂಗಳೂರು, ಆ.19: ಸರಕಾರ ನ್ಯಾ.ನಾಗಮೋಹನ್ ದಾಸ್ ಆಯೋಗದ ಶಿಫಾರಸು ಆಧರಿಸಿ ಒಳಮೀಸಲಾತಿಯನ್ನು ಘೋಷಣೆ ಮಾಡಿದ ಬೆನ್ನಲ್ಲೇ, ನಗರದ ಫ್ರೀಡಂ ಪಾರ್ಕ್ ನಲ್ಲಿ ಒಳಮೀಸಲಾತಿ ಹೋರಾಟಗಾರರು ಸಂಭ್ರಮಾಚರಣೆ ಮಾಡಿದರು.
ಮೂರು ದಶಕಗಳ ಒಳಮೀಸಲಾತಿ ಹೋರಾಟಕ್ಕೆ ಜಯ ಸಿಕ್ಕಿದೆ. ಸರಕಾರ ಒಳಮೀಸಲಾತಿ ಜಾರಿ ಮಾಡಿದೆ ಎಂದು ಘೋಷಣೆ ಕೂಗಿದರು. ಇದೇ ವೇಳೆ ಹೋರಾಟಗಾರರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನೆ ಸೇರಿದಂತೆ ಅಪಾರ ಸಂಖ್ಯೆಯ ಹೋರಾಟಗಾರರು, ಕಾರ್ಯಕರ್ತರು ಹಾಜರಿದ್ದರು.
ಪೊಲೀಸರು- ಹೋರಾಟಗಾರರ ನಡುವೆ ವಾಗ್ವಾದ :
ಒಳ ಮೀಸಲಾತಿ ಹೋರಾಟಗಾರರು ಸಂಭ್ರಮಾಚರಣೆ ಮಾಡುತ್ತಿರುವಾಗಲೇ, ಮೈಕ್ ಆಫ್ ಮಾಡಿಸಿದ ಪೊಲೀಸರ ನಡೆಯನ್ನು ಹೋರಾಟಗಾರರು ಪ್ರಶ್ನಿಸಿದರು. ಇದರಿಂದ ಪೊಲೀಸರು ಮತ್ತು ಹೋರಾಟಗಾರರ ನಡುವೆ ಕೆಲವೊತ್ತು ವಾಗ್ವಾದ ನಡೆಯಿತು.
'ಒಳಮೀಸಲಾತಿ ಜಾರಿಗೊಳಿಸಿದ ರಾಜ್ಯ ಸರಕಾರಕ್ಕೆ ಧನ್ಯವಾದಗಳು. ಆದರೆ, ಪರಿಶಿಷ್ಟ ಜಾತಿಯಲ್ಲಿನ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾದರೆ ಮತ್ತೆ ಹೋರಾಟ ಮಾಡುತ್ತೇವೆ. ನ್ಯಾ.ನಾಗಮೋಹನ್ ದಾಸ್ ಅವರ ವರದಿ ಯತಾವತ್ತಾಗಿ ಜಾರಿ ಆಗಬೇಕಿತ್ತು. ಆದರೆ, ರಾಜಕೀಯ ಒತ್ತಡಕ್ಕಾಗಿ ಅದು ಆಗುತ್ತಿಲ್ಲ. ಮಾದಿಗ ಸಮುದಾಯದವರಿಗೆ ಇನ್ನಷ್ಟು ಪಾಲು ಸಿಗಬೇಕು. ಮುಂದಿನ ಜನಗಣತಿಯಲ್ಲಿ ಅದನ್ನು ಪಡೆಯುತ್ತೇವೆ. ಈಗಿನ ಸರಕಾರದ ನಡೆಯನ್ನು ಸ್ವಾಗತಿಸುತ್ತೇವೆ'
- ಬಸವರಾಜ್ ಕೌತಾಳ್, ಒಳಮೀಸಲಾತಿ ಹೋರಾಟಗಾರ







