ಒಳಮೀಸಲಾತಿ ಮಸೂದೆ ವಾಪಸ್ ಕಳುಹಿಸಿದ ರಾಜ್ಯಪಾಲರು : ನೇಮಕಾತಿ ಪ್ರಕ್ರಿಯೆ ವಿಳಂಬ ಸಾಧ್ಯತೆ

ಥಾವರ್ಚಂದ್ ಗೆಹ್ಲೋಟ್ PC : PTI
ಬೆಂಗಳೂರು : ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ‘ಕರ್ನಾಟಕ ಅನುಸೂಚಿತ ಜಾತಿಗಳ ಉಪವರ್ಗೀಕರಣ ವಿಧೇಯಕ’ಕ್ಕೆ ಸ್ಪಷನೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಸೂದೆ ವಾಪಸ್ ಕಳುಹಿಸಿದ್ದು, ಇದರಿಂದಾಗಿ ಸರಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಗಳಿವೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹಲವು ಸಮುದಾಯಗಳು ದಶಕಗಳಿಂದ ಹೋರಾಟ ಮಾಡುತ್ತಿದ್ದವು. ಆ ಹಿನ್ನೆಲೆಯಲ್ಲಿಯೇ ಸುಪ್ರೀಂ ಕೋರ್ಟ್ ತೀರ್ಪು ಕೂಡ ಬಂದಿತ್ತು. ಹೀಗಾಗಿ ರಾಜ್ಯ ಸರಕಾರ ಒಳಮೀಸಲಾತಿಗೆ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿತ್ತು.
ಆಯೋಗವು ಸಮೀಕ್ಷೆ ನಡೆಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕಲ್ಪಿಸುವ ಕುರಿತು ನಿರ್ದಿಷ್ಟ ಶಿಫಾರಸುಗಳೊಂದಿಗೆ 2024ರ ಆಗಸ್ಟ್ 4ರಂದು ವರದಿ ಸಲ್ಲಿಸಿದ್ದು, ರಾಜ್ಯ ಸರಕಾರ ಕೆಲ ಮಾರ್ಪಾಡುಗಳೊಂದಿಗೆ ಆ ವರದಿಯನ್ನು ಸ್ವೀಕರಿಸಿತ್ತು. 2025ರ ಅಕ್ಟೋಬರ್ನಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕೋಟಾವನ್ನು ಸೂಚಿಸಿತ್ತು.
ಆದರೆ, ಇದುವರೆಗೂ ಸರಕಾರ ಪರಿಶಿಷ್ಟ ಜಾತಿಗಳನ್ನು ಗುರುತಿಸಲು ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಮಾರ್ಗಸೂಚಿಗಳನ್ನು ಹೊರಡಿಸಿರಲಿಲ್ಲ. ಹೀಗಾಗಿಯೇ ಡಿಸೆಂಬರ್ ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಸರಕಾರ, ಒಳಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತು. ಒಳಮೀಸಲಾತಿ ಸೌಲಭ್ಯಗಳ ನ್ಯಾಯಯುತ ಮತ್ತು ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪರಿಶಿಷ್ಟ ಜಾತಿಗಳ ವಿವಿಧ ಉಪ ಪಂಗಡಗಳ ನಡುವೆ ಶೇ.6, ಶೇ.6, ಶೇ.5ರ ಅನುಪಾತದಲ್ಲಿ ಮೀಸಲಾತಿ ಕೋಟಾವನ್ನು ವಿಭಜಿಸಲಾಗಿತ್ತು.
ಡಿಸೆಂಬರ್ ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜರುಗಿನ ವಿಧಾನ ಮಂಡಲ ಅಧಿವೇಶನದಲ್ಲಿ ಒಳ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ರವಾನಿಸಿತ್ತು. ಈ ಮಸೂದೆಗೆ ಹೆಚ್ಚಿನ ಸ್ಪಷ್ಟೀಕರಣ ಕೋರಿ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸರಕಾರದ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಇದೀಗ ಮಸೂದೆಗೆ ವಿವರಣೆ ಕೋರಿದ ಹಿನ್ನೆಲೆಯಲ್ಲಿ ಸರಕಾರದ ಹಲವು ಇಲಾಖೆಗಳ ನೇಮಕಾತಿ ಸದ್ಯಕ್ಕೆ ನೆನೆಗುದಿಗೆ ಬೀಳಲಿದೆ. ಹೀಗಾಗಿ ಸರಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮಸ್ಯೆ ಬಗೆಹರಿದ ತಕ್ಷಣವೇ ಪೊಲೀಸ್, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿ ಭರ್ತಿಗೆ ಮುಂದಾಗಬೇಕಾಗುತ್ತದೆ ಎಂದು ಗೊತ್ತಾಗಿದೆ.







