ತಯಾರಿಕಾ ವಲಯದಲ್ಲಿ ಉದ್ಯೋಗಗಳು ಹಾಗೂ ಪೂರೈಕೆ ಸರಣಿಯ ಸ್ಥಿತಿಗಳು ಬದಲಾಗುತ್ತಿವೆ: ಭುವನ್ ಲೋಧಾ
‘ಇನ್ವೆಸ್ಟ್ ಕರ್ನಾಟಕ-2025’

ಬೆಂಗಳೂರು: ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ತಯಾರಿಕಾ ವಲಯದಲ್ಲಿ ಉದ್ಯೋಗಗಳು ಹಾಗೂ ಪೂರೈಕೆ ಸರಣಿಯ ಪರಿಸ್ಥಿತಿಗಳು ಬದಲಾಗುತ್ತಿವೆ ಎಂದು ಮಹೀಂದ್ರಾ ಗ್ರೂಪ್ ಸಂಸ್ಥೆಯ ಎಐ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭುವನ್ ಲೋಧಾ ಹೇಳಿದರು.
ಗುರುವಾರ ಬೆಂಗಳೂರು ಅರಮನೆ ಆವರಣದಲ್ಲಿ ‘ಇನ್ವೆಸ್ಟ್ ಕರ್ನಾಟಕ-2025’ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನಡೆದ ‘ಉದ್ಯಮ 5.0-ಮಾನವ ಕೇಂದ್ರಿತ ಕ್ರಾಂತಿಯಾಗಿ ತಯಾರಿಕಾ ವಲಯದ ಮರುವ್ಯಾಖ್ಯಾನ' ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಅವರು, ಎಐ ತಂತ್ರಜ್ಞಾನ ಬಳಕೆಯೊಂದಿಗೆ ತಯಾರಿಕೆ ಸೇರಿದಂತೆ ವಿವಿಧ ವಲಯಗಳ ಕೌಶಲ್ಯ ನಿರೀಕ್ಷೆ ಮತ್ತು ಬೇಡಿಕೆ ಬದಲಾಗುತ್ತಿದೆ ಎಂದರು.
ಸುಧಾರಿತ ಸಾಫ್ಟ್ ವೇರ್ ಗಳ ಅಳವಡಿಕೆಯಿಂದಾಗಿ ಸರಕು ತಯಾರಿಕೆಯ ಸ್ವರೂಪ ಬದಲಾಗಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೈಜ ಕ್ಷಣದಲ್ಲಿ (ರಿಯಲ್ ಟೈಮ್ ನಲ್ಲಿ) ಒದಗಿಸುವುದು ಹಿಂದೆಂದಿಂಗಿಂತಲೂ ಹೆಚ್ಚು ಮುಖ್ಯವಾಗಿದೆ. ಡಾಟಾ ಸೈನ್ಸ್ ಸೇರಿದಂತೆ ವಿವಿಧ ತಂತ್ರಜ್ಞಾನದಿಂದಾಗಿ ಗ್ರಾಹಕರ ಮನೋಗುಣವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಉದ್ಯಮ ವಲಯದಲ್ಲಿ ನಿರ್ಧಾರ ಕೈಗೊಳ್ಳುವಿಕೆ ಅಥವಾ ‘ಡಿಸಿಷನ್ ಮೇಕಿಂಗ್' ಅತಿ ಪ್ರಮುಖ ಘಟ್ಟವಾಗಿದ್ದು, ಸುಧಾರಿತ ತಂತ್ರಜ್ಞಾನದ ಬಳಕೆಯಿಂದಾಗಿ ಡಿಸಿಷನ್ ಮೇಕಿಂಗ್ ವಿಧಾನ ಈಗ ಬದಲಾಗುತ್ತಿದೆ. ತಂತ್ರಜ್ಞಾನ ಯುಗದ ಹೊಸಜಗತ್ತಿನಲ್ಲಿ ಮಾನವ ಮತ್ತು ಯಂತ್ರಗಳು ಸಮನ್ವಯದಿಂದ ಒಟ್ಟಿಗೆ ಕಾರ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ ಎಂದು ಭುವನ್ ಲೋಧಾ ವಿವರಿಸಿದರು.
‘ಕಿಂಡ್ರಿಲ್ ಇಂಡಿಯಾ' ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಂಗರಾಜ್ ಸಾವಕಾರ್, ಪ್ರಸಕ್ತ ಕಾಲಘಟ್ಟದಲ್ಲಿ, ಮಾರುಕಟ್ಟೆಯ ಮುಂದಿನ ಋತುಮಾನದಲ್ಲಿ ಗ್ರಾಹಕರ ನಿರೀಕ್ಷೆಗಳೇನು ಎಂದು ಊಹಿಸುವುದು ಸವಾಲಾಗಿದೆ ಎಂದು ಹೇಳಿದರು.
ತಂತ್ರಜ್ಞಾನದಿಂದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂ ಎಸ್ ಎಂ ಇ) ವಲಯದ ತಯಾರಿಕಾ ವಿನ್ಯಾಸ ಮತ್ತು ಉತ್ಪನ್ನದಲ್ಲಿ ಮೌಲ್ಯವರ್ಧನೆಯಾಗಿದೆ. ಇದಕ್ಕೆ ಪೂರಕವಾಗಿ ಈ ವಲಯಕ್ಕೆ ಹೂಡಿಕೆಯೂ ಹರಿದುಬರಬೇಕಿದ್ದು, ಸರಕಾರದ ನೀತಿಯೂ ಬದಲಾಗಬೇಕಿದೆ ಎಂದು ಅವರು ತಿಳಿಸಿದರು.
ವೇಲ್ಸ್ ನ ಸ್ವಾನ್ ಸೀ ವಿ.ವಿ. ಕಂಪ್ಯೂಟರ್ ಸೈನ್ಸಸ್ ವಿಭಾಗದ ನಿರ್ದೇಶಕ ಬರ್ಟಿ ಮುಲ್ಲರ್, ತಯಾರಿಕಾ ವಲಯದಲ್ಲಿ ಸಾಂಪ್ರದಾಯಿಕ ವಿಧಾನಕ್ಕಿಂತ ತಂತ್ರಜ್ಞಾನ ಬಲದ ಸ್ಮಾರ್ಟ್ ವಿಧಾನ ಇಂದು ಹೆಚ್ಚು ಅಗತ್ಯವಾಗಿದೆ ಎಂದು ಲಿಂಗರಾಜ್ ಸಾವಕಾರ್ ಹೇಳಿದರು.
ಎಐ ತಂತ್ರಜ್ಞಾನದ ಬಳಕೆಯೊಂದಿಗೆ ಕೈಗಾರಿಕಾ ವಲಯದಲ್ಲಿ ಭಾವನಾತ್ಮಕ ಬುದ್ಧಿಮತ್ತೆ ಹಾಗೂ ಸೃಜನಶೀಲ ಬುದ್ಧಿಮತ್ತೆಯ ಸಮನ್ವಯತೆ ಆಗುತ್ತಿದೆ. ಇದರ ಪರಿಣಾಮವನ್ನು ಉತ್ಪನ್ನಗಳಲ್ಲಿ ಕಾಣುತ್ತಿದ್ದೇವೆ. ಇಂದು ಗ್ರಾಹಕರ ವೈಯಕ್ತಿಕ ಬೇಡಿಕೆ ಅನುಸಾರ ವ್ಯಕ್ತಿಗತ ಅಪೇಕ್ಷೆಗೆ ತಕ್ಕಂತೆ (ಪರ್ಸನಲೈಸ್ಡ್) ಉತ್ಪನ್ನಗಳ ತಯಾರಿಕೆ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಏಷ್ಯಾ-ಪೆಸಿಫಿಕ್ ಇಕನಾಮಿಸ್ಟ್ ಇಂಪ್ಯಾಕ್ಟ್ ವೇದಿಕೆಯ ತಂತ್ರಜ್ಞಾನ ಮತ್ತು ಸೊಸೈಟಿ ವಿಭಾಗದ ಮುಖ್ಯಸ್ಥ ಚಾಲ್ರ್ಸ ರಾಸ್ ಗೋಷ್ಠಿ ನಿರ್ವಹಿಸಿದರು.







