ತನಿಖಾ ಪತ್ರಿಕೋದ್ಯಮ ಸತ್ತು ಹೋಗಿದೆ: ಸಿಎಂ ಸಿದ್ದರಾಮಯ್ಯ ಬೇಸರ
ಸಿಎಂ ಸಿದ್ದರಾಮಯ್ಯ (Photo:X/@siddaramaiah)
ಬೆಂಗಳೂರು: ಪತ್ರಿಕೋದ್ಯಮದ ಇತ್ತೀಚಿನ ದಿನಗಳಲ್ಲಿ ತನಿಖಾ ವರದಿಗಾರಿಕೆ ಸತ್ತು ಹೋಗಿದ್ದು, ಯಾರೂ ಯಾವುದೇ ಮಾಹಿತಿ ದೃಢಿಕರಿಸಲು ಮುಂದಾಗುತ್ತಿಲ್ಲ, ತಮ್ಮ ಅಭಿಪ್ರಾಯಗಳನ್ನೇ ಸುದ್ದಿಗಳಾಗಿ ಮುದ್ರಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಪುರಭವನ ಸಭಾಂಗಣದಲ್ಲಿ ಈದಿನ.ಕಾಮ್ ಸುದ್ದಿ ವೆಬ್ಸೈಟ್ ಆಯೋಜಿಸಿದ್ದ ಓದುಗರ ಸಮಾವೇಶದಲ್ಲಿ “ಈದಿನ.ಕಾಮ್”ನ ವಿಶೇಷ ಸಂಚಿಕೆಯನ್ನು ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತನಿಖಾ ವರದಿಗಾರಿಕೆ ಎನ್ನುವುದು ಇಲ್ಲವೇ ಇಲ್ಲ. ಇದು ಶೂನ್ಯಕ್ಕೆ ಇಳಿದಿದೆ ಎಂದರು.
ಒಬ್ಬರು ಮಳೆ ಬರುತ್ತಿದೆ ಎಂದರೆ, ಇನ್ನೊಬ್ಬರು ಮಳೆ ಬರಲ್ಲ ಎಂದು ಬರೆಯುತ್ತಾರೆ. ಆದರೆ, ಮಳೆ ಬರುತ್ತದೆ ಎನ್ನುವುದು ಖಚಿತ ಇರಬೇಕು. ಆದರೆ,ಇಂತಹ ತನಿಖಾ ವರದಿಗಾರಿಕೆಯೇ ಇಲ್ಲದಂತೆ ಆಗಿದೆ. ಹಾಗೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವುದು ಬಹು ಕೆಟ್ಟ ಅಭ್ಯಾಸವಾಗಿದ್ದು, ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುವುದಿಲ್ಲ ಎಂದು ಅವರು ಹೇಳಿದರು.
ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಪ್ರತಿಯೊಬ್ಬರು ತಡೆಯಬೇಕಾಗಿದೆ ಎಂದ ಅವರು, ನನ್ನ ಬಗ್ಗೆ ಹಲವರು ಕೆಟ್ಟದಾಗಿ ಬರೆಯುತ್ತಾರೆ, ಟೀಕಿಸುತ್ತಾರೆ. ಆದರೆ, ನಾನು ಯಾರಿಗೂ ಯಾಕೆ ಹೀಗೆ ಬರೆಯುತ್ತೀರಿ ಎಂದು ಇದುವರೆಗೂ ಪ್ರಶ್ನಿಸಿಲ್ಲ. ಮಾಧ್ಯಮಗಳು ಸತ್ಯವನ್ನು ಹೇಳಬೇಕೆನ್ನುವುದು ಸಂವಿಧಾನದ ಆಶಯ. ಒಂದು ವೇಳೆ, ಮಾಧ್ಯಮಗಳು ಸುಳ್ಳು ಹೇಳಿದರೆ, ತಪ್ಪು ಬರೆದರೆ, ಅದನ್ನು ಓದುಗರು ಖಂಡಿಸಬೇಕು ಎಂದರು.
ಸಂವಿಧಾನದ ನಾಲ್ಕನೆ ಅಂಗವಾಗಿರುವ ಮಾಧ್ಯಮ ಪ್ರಬಲವಾದ ಅಸ್ತ್ರವಾಗಿದೆ. ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡುವುದು ಈ ಮಾಧ್ಯಮ.ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಹೋಲಿಸಿದರೆ, ಡಿಜಿಟಲ್ ಮಾಧ್ಯಮ ಹೆಚ್ಚಾಗಿ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡುತ್ತಿದೆ.ಇದು ಒಳ್ಳೆಯ ಬೆಳವಣಿಗೆ ಆಗಿದ್ದು, ಸಮಾಜದ ನ್ಯೂನತೆಗಳನ್ನು ಎತ್ತಿಹಿಡಿಯುವ ವಿಶ್ವಾಸ ಇದೆ ಎಂದು ನುಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾರಿಗೆ ಇತಿಹಾಸ ಗೊತ್ತಿಲ್ಲವೋ, ಅವರು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ನಮಗೆ ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ ಹೊರತು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲ. ಪ್ರಜಾಪ್ರಭುತ್ವ ಯಶಸ್ಸು ಕಾಣಲಿಕ್ಕೆ ಸಾಮಾಜಿಕ, ಆರ್ಥಿಕ ಸಮಾನತೆ ಸಿಕ್ಕಾಗ ಮಾತ್ರ ಸಾಧ್ಯ ಎಂದಿದ್ದರು. ಅದರಂತೆ ನಾವು ಸಾಮಾಜಿಕ, ಆರ್ಥಿಕಸಮಾನತೆಗಾಗಿ ಹೋರಾಟ ಮಾಡಬೇಕು. ಆ ದಿಕ್ಕಿನಲ್ಲಿನಡೆಯಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬರಹಗಾರ್ತಿ, ಹಿರಿಯ ಪತ್ರಕರ್ತೆ ಸೀಮಾ ಚಿಸ್ತಿ, ಸರಕಾರ ಮತ್ತು ಜನತೆಯ ನಡುವೆ ಮಾಧ್ಯಮಗಳು ಸೇತುವೆಗಳಾಗಿ ಕೆಲಸ ಮಾಡುತ್ತವೆ. ಸಂವಿಧಾನಬದ್ಧ ಆಡಳಿತ ಸಂಸ್ಥೆಗಳು ಹದ್ದುಮೀರಿದಾಗ ಅವುಗಳ ಹೊಣೆಗಾರಿಕೆಯನ್ನು ನೆನಪಿಸುವ, ಜನಪರವಾಗಿರುವಂತೆ ನೋಡಿಕೊಳ್ಳುವ, ಶಾಸನಸಭೆಗಳು ರೂಪಿಸುವ ಶಾಸನಗಳ ಬಗ್ಗೆ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಇವು ಮೊದಲಿನಿಂದಲೂ ಮಾಡಿಕೊಂಡು ಬಂದಿವೆ ಎಂದರು.
ಇತ್ತೀಚಿಗೆ ಯಾವುದಾದರೂ ಹಗರಣಗಳ ಕುರಿತು ಮಾಧ್ಯಮಗಳು ವರದಿ ಮಾಡಿದ ಕೂಡಲೇ ಅವುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಂಥ ಸುದ್ದಿಗಳನ್ನು ಪ್ರಕಟಿಸಿದಂತೆ ತಡೆಯಾಜ್ಞೆ ತರುವ ಚಾಳಿ ಕೂಡ ಅಧಿಕವಾಗಿದೆ. ಇದರಿಂದ ಮಾಧ್ಯಮಗಳ ಸುಗಮ ಕಾರ್ಯ ನಿರ್ವಹಣೆಗೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ. ಇದೀಗ ಮಾಧ್ಯಮಗಳಿಗೆ ಪೂರ್ಣ ಸ್ವಾತಂತ್ರ್ಯವಿರಬೇಕು ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದ್ದು, ಇದು ಎಲ್ಲರ ಆಶಯ ಸಹ ಆಗಿದೆ ಎಂದು ಹೇಳಿದರು.
ಪ್ರಸ್ತಾವಿಕ ಮಾತುಗಳನ್ನಾಡಿದ ಈದಿನ.ಕಾಮ್ನ ಸಮುದಾಯ ವಿಭಾಗದ ಮುಖ್ಯಸ್ಥ ಡಾ.ಎಚ್.ವಿ.ವಾಸು, ಕೆಲ ಟಿವಿ ಸುದ್ದಿ ವಾಹಿನಿಗಳಲ್ಲಿ ನಿತ್ಯ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸುದ್ದಿ ಹಬ್ಬಿಸುವುದು ಮಾತ್ರವಲ್ಲದೆ, ಮುಸ್ಲಿಮರು ಈ ಸಮಾಜದ ಖಳನಾಯಕರಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ, ಶೋಷಿತ, ಕಾರ್ಮಿಕ ಸಮಾಜವನ್ನು ಸಹ ನಿರ್ಲಕ್ಷ್ಯತೆ ಕಡೆ ದೂಡುವ ಪ್ರಯತ್ನ ಕೆಲ ಮಾಧ್ಯಮಗಳಿಂದ ಆಗುತ್ತಿದೆ.ಇಂತಹ ಸಂದರ್ಭದಲ್ಲಿಯೇ ದನಿಗೂಡಿಸುವ ಸಲುವಾಗಿ ಈದಿನ.ಕಾಮ್ ಹುಟ್ಟು ಹಾಕಲಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಕಮಹಾದೇವಿ ವಿವಿಯ ವಿಶ್ರಾಂತ ಉಪಕುಲಪತಿ ಡಾ.ಸಬೀಹಾ ಭೂಮಿಗೌಡ ವಹಿಸಿದ್ದರು. ಉಮರ್ ಯು.ಎಚ್. ಸ್ವಾಗತಿಸಿದರು. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಜೀಂ ಪ್ರೇಮ್ಜಿ ವಿವಿ ಪ್ರಾಧ್ಯಾಪಕ ಪ್ರೊ. ಎ.ನಾರಾಯಣ, ಚಂಬಲ್ ಮೀಡಿಯಾ ನಿರ್ದೇಶಕಿ ಪ್ರಿಯಾ ತುವಸ್ಸೆರಿ, ಈದಿನ.ಕಾಮ್ ಕನ್ಸಲೆಂಟ್ ಎಡಿಟರ್ ಡಿ.ಉಮಾಪತಿ, ಸಂಪಾದಕ ಬಸವರಾಜು ಮೇಗಲಕೇರಿ ಸೇರಿದಂತೆ ಪ್ರಮುಖರಿದ್ದರು.