IPL 2026 | ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆದಿದ್ದರೆ ಆರ್ಸಿಬಿ ಅಭಿಮಾನಿಗಳಿಗೆ ಅಪೂರ್ವ ಕ್ಷಣ: ಡಿ.ಕೆ. ಶಿವಕುಮಾರ್

Photo: x.com/htTweets
ಬೆಂಗಳೂರು: ವಿರಾಟ್ ಕೊಹ್ಲಿಯವರ ಭರ್ಜರಿ ಅರ್ಧಶತಕದ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರವಿವಾರ ಅಹ್ಮದಾಬಾದ್ ನಲ್ಲಿ ನಡೆದ ಐಪಿಎಲ್ ಟೂರ್ನಿ ಫೈನಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ಈ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿದ್ದರೆ ಆರ್ ಸಿಬಿ ಅಭಿಮಾನಿಗಳಿಗೆ ಅದು ಅಪೂರ್ವ ಕ್ಷಣವಾಗುತ್ತಿತ್ತು ಎಂದು ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
"ಆರ್ಸಿಬಿ ಪಂದ್ಯ ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ನಮಗೆ ಅನ್ಯಾಯವಾಗಿದೆ. ರಾಜಕೀಯದಿಂದಾಗಿ ಅದನ್ನು ಸ್ಥಳಾಂತರಿಸಲಾಗಿದೆ. ಇದಕ್ಕಿಂತ ಹೆಚ್ಚು ನಾನೇನೂ ಹೇಳುವುದಿಲ್ಲ" ಎಂದು ಅವರು ಅಭಿಪ್ರಾಯಪಟ್ಟರು.
"ಆರ್ ಸಿಬಿ ಆಟಗಾರರಿಗೆ ಆರ್ ಸಿಬಿ ತಂಡಕ್ಕೆ ಪಂದ್ಯ ಗೆದ್ದ ಸಮಧಾನವಿದೆ. ಅವರು ಈ ವರ್ಷವೂ ಅದ್ಭುತ ಆಟ ಆಡಿದ್ದಾರೆ. ಕರ್ನಾಟಕದ ಅಭಿಮಾನಿಗಳ ಪರವಾಗಿ, ಆರ್ ಸಿಬಿ ಅಭಿಮಾನಿಗಳ ಪರವಾಗಿ, ಕರ್ನಾಟಕ ರಾಜ್ಯದ ಪರವಾಗಿ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ" ಎಂದು ಹೇಳಿದರು.
ಆರ್ಸಿಬಿ ಕಳೆದ ವರ್ಷ ಅಹ್ಮದಾಬಾದ್ ನಲ್ಲೇ ಪ್ರಶಸ್ತಿ ಗೆದ್ದಿತ್ತು. ಇದೀಗ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ ಕೆ ತಂಡಗಳ ಸಾಲಿಗೆ ಅರ್ ಸಿಬಿ ಸೇರ್ಪಡೆಯಾಗಿದ್ದು, ಸತತ ಒಂಬತ್ತನೇ ಬಾರಿ ಕ್ವಾಲಿಫೈಯರ್-1 ಪಂದ್ಯದಲ್ಲಿ ಗೆದ್ದ ತಂಡ ಪ್ರಶಸ್ತಿ ಗೆದ್ದಂತಾಗಿದೆ.
ಜೋಶ್ ಹೇಝಲ್ ವುಡ್ ಅವರು ಫೈನಲ್ ನಲ್ಲಿ ಅಜೇಯರಾಗಿ ಉಳಿದರೆ, ಕೃನಾಲ್ ಪಾಂಡ್ಯ ತಾವಾಡಿದ ಪ್ರತಿ ಐಪಿಎಲ್ ಫೈನಲ್ ನಲ್ಲಿ ಗೆಲುವು ಸಾಧಿಸಿದಂತಾಗಿದೆ. 2022ರಲ್ಲಿ ಪ್ರಶಸ್ತಿ ಗೆದ್ದಿದ್ದ ಜಿಟಿ, ರವಿವಾರ ಆರ್ ಸಿಬಿಯ ಶಿಸ್ತುಬದ್ಧ ಬೌಲಿಂಗ್ ಎದುರು ಮಂಡಿಯೂರಬೇಕಾಯಿತು. ಆರು ದಿನಗಳ ಅಂತರದಲ್ಲಿ ಜಿಟಿ ಬೇರೆ ಬೇರೆ ಮೈದಾನಗಳಲ್ಲಿ ಮೂರು ಪಂದ್ಯಗಳನ್ನಾಡಿದಂತಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಶನಿವಾರ ರಾತ್ರಿಯಷ್ಟೇ ತಂಡ ಅಹ್ಮದಾಬಾದ್ ತಲುಪಿತ್ತು.






