ಐಪಿಎಲ್ ಪಂದ್ಯದ ದಿನವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240 ಸಿಸಿಟಿವಿ ಕೇಬಲ್ ಕತ್ತರಿಸಿದ ಸಿಬ್ಬಂದಿ: ಸಂಬಳ ನೀಡದಿದ್ದಕ್ಕೆ ಕೃತ್ಯ, ಇಬ್ಬರ ಬಂಧನ

ಚಿನ್ನಸ್ವಾಮಿ ಕ್ರೀಡಾಂಗಣ(PC : PTI)
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ ದಿನವೇ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಕೇಬಲ್ಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಈ ಕೃತ್ಯದ ಹಿಂದಿನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದ ಉಪವಿತರಕ ಸಂಸ್ಥೆಯ ಸಿಬ್ಬಂದಿಗಳಾದ ಮಂಜುನಾಥ್.ಇ ಹಾಗೂ ಅಬ್ದುಲ್ ಕಲಾಂ ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯದ ಹಿಂದೆ ಯಾವುದೇ ಸಂಚು ಅಥವಾ ಬೆಟ್ಟಿಂಗ್ ದಂಧೆಯ ಕೈವಾಡವಿಲ್ಲ, ಬದಲಾಗಿ ಸಂಬಳ ನೀಡದ ಕೋಪವಿದೆ ಎಂಬುದು ಬಹಿರಂಗವಾಗಿದೆ.
ಎ.24ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹಾಗೂ ಗುಜರಾತ್ ಟೈಟಾನ್ಸ್(ಜಿಟಿ) ನಡುವಿನ ಪಂದ್ಯದ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಯ ಮೇಲ್ವಿಚಾರಣೆಗಾಗಿ ಅಳವಡಿಸಲಾಗಿದ್ದ 240 ಸಿಸಿಟಿವಿ ಕ್ಯಾಮೆರಾಗಳ ಫೀಡ್ ಏಕಾಏಕಿ ಆಫ್ ಆಗಿತ್ತು. ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ಇದ್ದಕ್ಕಿದ್ದಂತೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಲೋಪವಾಗಿರುವುದು ಪೊಲೀಸರ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಪರಿಶೀಲನೆ ನಡೆಸಿದಾಗ ಇದು ತಾಂತ್ರಿಕ ದೋಷವಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ದುಷ್ಕೃತ್ಯ ಎಂಬುದು ಬಯಲಾಗಿತ್ತು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಮ್ಮ ಸಂಸ್ಥೆಯ ಮೇಲಿನ ಸಿಟ್ಟಿಗೆ ಈ ರೀತಿ ಕೃತ್ಯ ಎಸಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆಯನ್ನು ‘ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್’ ಎಂಬ ಉಪವಿತರಕ ಸಂಸ್ಥೆಗೆ ನೀಡಲಾಗಿತ್ತು. ಕಂಪೆನಿಯಿಂದ ಬರಬೇಕಿದ್ದ ವೇತನ ಬಾಕಿಯಿದ್ದುದರಿಂದ ಕೋಪದಿಂದ ಕೃತ್ಯ ಎಸಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಪಂದ್ಯದ ದಿನ ತಮ್ಮ ಬಳಿಯಿದ್ದ ನಿಷ್ಕ್ರೀಯಗೊಂಡ ಹಳೆಯ ಐ.ಡಿ. ಕಾರ್ಡ್ಗಳನ್ನು ಬಳಸಿ ಕ್ರೀಡಾಂಗಣದೊಳಗೆ ಪ್ರವೇಶಿಸಿದ್ದಾರೆ. ನಂತರ ನೇರವಾಗಿ ಸಿಸಿಟಿವಿ ಸರ್ವರ್ ರೂಂಗೆ ತೆರಳಿ ಅಲ್ಲಿನ ಕೇಬಲ್ಗಳನ್ನು ಕಡಿತಗೊಳಿಸಿದ್ದರು. ಇದರಿಂದ ಪ್ರವೇಶ ದ್ವಾರಗಳ ಕ್ಯಾಮೆರಾಗಳು, ಕ್ರೀಡಾಂಗಣದ ಸುತ್ತಮುತ್ತಲಿನ ಕ್ಯಾಮೆರಾಗಳು, ಡಿ ಕಾರ್ಪೊರೇಟ್ ಸ್ಟ್ಯಾಂ ಡ್ ಮತ್ತಿತರ ಭಾಗಗಳ ದೃಶ್ಯಾವಳಿಗಳ ಫೀಡ್ ಸ್ಥಗಿತವಾಗಿತ್ತು. ಸಿಸಿಟಿವಿ ದೃಶ್ಯಗಳು ಬಂದ್ ಆಗಿದ್ದರಿಂದ ಭದ್ರತಾ ಮೇಲ್ವಿಚಾರಣೆಯಲ್ಲಿ ಭಾರೀ ಹಿನ್ನಡೆಯಾಗಿತ್ತು. ಆದರೂ ಪಟ್ಟುಬಿಡದ ಪೊಲೀಸರು, ವಿಷಯ ತಿಳಿಯುತ್ತಿದ್ದಂತೆಯೇ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿ, ತಕ್ಷಣವೇ ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧಪಡಿಸಿ ಪಂದ್ಯದ ಭದ್ರತೆ ನಿರ್ವಹಿಸಿದ್ದರು.
ಕೃತ್ಯದ ಬಗ್ಗೆ ಕ್ರೀಡಾಂಗಣದ ತಾಂತ್ರಿಕ ತಂಡ ನೀಡಿದ ದೂರಿನ ಮೇರೆಗೆ ಕಬ್ಬನ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ, ಕೃತ್ಯ ಎಸಗಿದ ಆರೋಪಿಗಳಿಗೆ ನೋಟಿಸ್ ನೀಡಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






