ಐಪಿಎಲ್ ಪಂದ್ಯ ಹಿನ್ನೆಲೆ: ಬಿಎಂಟಿಸಿ, ಮೆಟ್ರೋ ಬಳಸಲು ಸಂಚಾರ ಪೊಲೀಸರ ಮನವಿ

Photo Credit : iplt20.com
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ(ಮಾ.28) ಐಪಿಎಲ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಪ್ರೇಕ್ಷಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಸೇವೆಯನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಮಾ.28, ಎ.5ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯಲಿರುವ ಹಿನ್ನೆಲೆ ಇಲ್ಲಿನ ಕ್ವೀನ್ಸ್ ರಸ್ತೆಯ ಎರಡು ಬದಿಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ಮತ್ತು ಕ್ವೀನ್ಸ್ ರಸ್ತೆಯಿಂದ ಅನಿಲ್ ಕುಂಬ್ಳೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ. ಲಿಂಕ್ ರಸ್ತೆ-ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ, ಕಬ್ಬನ್ ರಸ್ತೆ ಸೇರಿದಂತೆ ಚಿನ್ನಸ್ವಾಮಿ ಕ್ರೀಡಾಂಗಣ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಆದರೆ, ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೆಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆ, ಫ್ರೀಡಂ ಪಾರ್ಕ ಎಂಎಲ್ಸಿಪಿ ಪಾರ್ಕಿಗ್ ಸ್ಥಳ, ಗರುಡಾ ಮಾಲ್ ಪಾರ್ಕಿಗ್ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿ, ಯುಬಿಸಿಟಿ ನಿಲುಗಡೆ ಸ್ಥಳ, ಕಂಠೀರವ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




