ಜ.6 ರಂದು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ : ಇಕ್ಬಾಲ್ ಹುಸೇನ್

ಇಕ್ಬಾಲ್ ಹುಸೇನ್/ಡಿ.ಕೆ.ಶಿವಕುಮಾರ್
ಬೆಂಗಳೂರು : ಶೇ.99ರಷ್ಟು ಭಾಗ ಜ.6ರಂದು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ದೊರಕುವ ಅವಕಾಶವಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ವಿರುದ್ಧ ಕಾರ್ಯಕ್ರಮವಿದೆ. ಅದಕ್ಕಾಗಿ ನಾಳೆ ದಿಲ್ಲಿಗೆ ಹೋಗುತ್ತಿದ್ದೇನೆ. ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನನ್ನ ವಿಧಾನಸಭಾ ಕ್ಷೇತ್ರದಿಂದ ಅನೇಕ ಮುಖಂಡರು ಹೋಗುತ್ತಿದ್ದೇವೆ. ನಾವು ಕಾಂಗ್ರೆಸ್ ಪಕ್ಷದ ಯಾವುದೇ ವರಿಷ್ಠರನ್ನು ಭೇಟಿ ಮಾಡುವುದಿಲ್ಲ ಎಂದು ತಿಳಿಸಿದರು.
ನಾವು ಈಗಾಗಲೇ ಮನವಿ ಮಾಡಿದ್ದೇವೆ. ಆ ಮನವಿಗೆ ಹೈಕಮಾಂಡ್ನಿಂದ ಸ್ಪಂದನೆ ಸಿಕ್ಕಿದೆ, ಆದಷ್ಟು ಬೇಗ ಕಾಂಗ್ರೆಸ್ ವರಿಷ್ಠರು ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಸಲ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದೇವೆ. ಶೇ.99ರಷ್ಟು ಭಾಗ ಜ.6ರಂದು ಸ್ಥಾನ ದೊರಕುವ ಅವಕಾಶವಿದೆ ಎಂದು ಹೇಳಿದರು.
6 ಮತ್ತು 9 ಡಿ.ಕೆ.ಶಿವಕುಮಾರ್ ಅವರ ಸಂಖ್ಯಾಬಲವಾಗಿದೆ. ಕಾಂಗ್ರೆಸ್ನಲ್ಲಿ ಯಾವುದೇ ಬಣವಿಲ್ಲ. ಎಲ್ಲರೂ ಒಂದೇ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಆಸ್ತಿ, ಇಬ್ಬರೂ ನಾಯಕರು. ಡಿ.ಕೆ.ಶಿವಕುಮಾರ್ ಅವರು ಮಾಡಿದ ಹೋರಾಟ, ಶ್ರಮಕ್ಕೆ ಅವರು ಮಾಡಿದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪ್ರತಿಫಲ ಸಿಗಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಇಕ್ಬಾಲ್ ಹುಸೇನ್ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ : ಡಿ.ಕೆ.ಶಿವಕುಮಾರ್
ಶಾಸಕ ಇಕ್ಬಾಲ್ ಹುಸೇನ್ಗೆ ಮಾತಿನ ಚಟ ಇದ್ದು, ಯಾರು ಅವನ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರೂ ಶಾಸಕ ಇಕ್ಬಾಲ್ ಹುಸೇನ್ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದರು.







