ನಿಮ್ಮ ಸರಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? #AnswerMadiModi: ಪ್ರಧಾನಿಗೆ ಸಿಎಂ ಪ್ರಶ್ನೆ
ʼರಾಜ್ಯದ 236 ತಾಲೂಕುಗಳ ಪೈಕಿ 216ರಲ್ಲಿ ಬರ ಪರಿಸ್ಥಿತಿ ಇದೆʼ

ಬೆಂಗಳೂರು: ಕೇಂದ್ರ ಸರಕಾರದ ಬರ ಪರಿಹಾರ ವಿಳಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ X ನಲ್ಲಿ ಪ್ರತಿಕ್ರಿಯಿಸಿರುವ ಅವರು, #AnswerMadiModi ಹ್ಯಾಶ್ ಟ್ಯಾಗ್ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
ʼʼರಾಜ್ಯದ 216 ತಾಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ, ಈ ವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ, ಜಗತ್ತಿನ ಕಷ್ಟ - ದು:ಖಕ್ಕೆಲ್ಲ ಮಿಡಿಯುವ ನಿಮ್ಮ 'ವಿಶಾಲ ಹೃದಯ ಕನ್ನಡಿಗರ ಬಗ್ಗೆ ಇಷ್ಟೊಂದು ಕಟುವಾಗಿರುವುದು ಯಾಕೆ?ʼʼ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼʼನಿಮ್ಮ (ನರೇಂದ್ರ ಮೋದಿ) ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ_ಕನ್ನಡಿಗರ ಪ್ರಶ್ನೆʼʼ ಎಂದು ಹೇಳಿದ್ದಾರೆ.
ʼʼಒಟ್ಟು 236 ತಾಲೂಕುಗಳ ಪೈಕಿ 216ರಲ್ಲಿ ಬರ ಪರಿಸ್ಥಿತಿ ಇದೆ. 33,770 ಸಾವಿರ ಕೋಟಿ - ಅ೦ದಾಜು ನಷ್ಟ, 17,901 ಕೋಟಿ - ಪರಿಹಾರಕ್ಕೆ ಮನವಿ ಮಾಡಲಾಗಿದೆ. ಕೇ೦ದ್ರದ ಬರ ಅಧ್ಯಯನ ತ೦ಡಕ್ಕೂ ಕರ್ನಾಟಕದ ಪರಿಸ್ಥಿತಿ ಮನವರಿಕೆಯಾಗಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲʼʼ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.







