ಕೆಆರ್‌ಐಡಿಎಲ್‍ನ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ; ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೆಂಗಳೂರು : ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್) ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ಗಳು ಭ್ರಷ್ಟಾಚಾರ ನಡೆಸಿ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆಂಬ ಆರೋಪವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ ಮಾಡಿದೆ.
ಇತ್ತೀಚೆಗೆ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ‘ಸಚಿವರ ಹೆಸರಲ್ಲೇ ಶೇ.7ರಷ್ಟು ಕಮಿಷನ್ ವಸೂಲಿ’ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಇದನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ತನಿಖೆಗೆ ಆದೇಶ: ಉಸ್ತುವಾರಿ ಮತ್ತು ಇಲಾಖೆಯ ಸಚಿವರ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಗಳು, ಇಂಜಿನಿಯರುಗಳು ಹಣ ವಸೂಲಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಕೆಆರ್ ಐಡಿಎಲ್‍ನ ಮಂಗಳೂರು ವಿಭಾಗದ ಕಾರ್ಯ ನಿರ್ವಾಹಕ ಮತ್ತು ಕಿರಿಯ ಇಂಜಿನಿಯರ್ ಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೇ, ಶಾಸಕರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆಯೇ ಎಂಬ ಬಗ್ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ದರ್ಜೆಯ ಅಧಿಕಾರಿ ನೇತೃತ್ವದ ತ್ರಿಸದಸ್ಯ ತಂಡದಿಂದ ತನಿಖೆಗೆ ಆದೇಶ ನೀಡಿದ್ದಾರೆ.
ಒಂದೊಮ್ಮೆ ಇಂಜಿನಿಯರುಗಳು ಭ್ರಷ್ಟಾಚಾರ ಮಾಡಿದ್ದಲ್ಲಿ ಅವರ ವಿರುದ್ಧ ಕೈಗೊಳ್ಳಬೇಕಾದ ಶಿಸ್ತು ಕ್ರಮದ ಶಿಫಾರಸಿನೊಂದಿಗೆ ವರದಿಯನ್ನು ಕಡತದಲ್ಲಿ ಏಳು ದಿನಗಳ ಒಳಗಾಗಿ ಸಲ್ಲಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಶಾಸಕ ಅಶೋಕ್ ರೈ ಆರೋಪ: ಮಂಗಳೂರು ಕೆಆರ್‌ಐಡಿಎಲ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ಗಳು ಭ್ರಷ್ಟಾಚಾರ ನಡೆಸಿ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಅಶೋಕ್ ರೈ ಆರೋಪ ಮಾಡಿದ್ದರು.






