ಗಗನಯಾನ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಏರ್-ಡ್ರಾಪ್ ಪರೀಕ್ಷೆ ಪೂರ್ಣಗೊಳಿಸಿದ ಇಸ್ರೋ

PC : @isro
ಬೆಂಗಳೂರು,ಆ.24: ಮುಂಬರುವ ಗಗನಯಾನ ಅಭಿಯಾನಕ್ಕಾಗಿ ಪ್ಯಾರಾಚೂಟ್-ಆಧಾರಿತ ನಿಧಾನ ಚಲನೆ ವ್ಯವಸ್ಥೆಯನ್ನು ದೃಢೀಕರಿಸಲು ಇಸ್ರೋ ರವಿವಾರ ಮೊದಲ ಇಂಟಿಗ್ರೇಟೆಡ್ ಏರ್ ಡ್ರಾಪ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಪರೀಕ್ಷೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ಸಮೀಪ ನಡೆಸಲಾಗಿದ್ದು,ಇಸ್ರೋ,ಭಾರತೀಯ ವಾಯುಪಡೆ, ಡಿಆರ್ಡಿಒ,ಭಾರತೀಯ ನೌಕಾಪಡೆ ಮತ್ತು ಭಾರತೀಯ ತಟರಕ್ಷಣಾ ಪಡೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದವು ಎಂದು ಇಸ್ರೋ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಗಗನಯಾನ ಯೋಜನೆಯು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ದೇಶದ ಮೊದಲ ಮಾನವ ಬಾಹ್ಯಾಕಾಶ ಯಾನವಾಗಲಿರುವ ಇದು ಸಿಬ್ಬಂದಿ ಸುರಕ್ಷತೆಗೆ ನಿರ್ಣಾಯಕ ವ್ಯವಸ್ಥೆಗಳನ್ನು ಪರೀಕ್ಷಿಸಲು ಪೂರ್ವಭಾವಿ ಮಾನವರಹಿತ ಅಭಿಯಾನಗಳನ್ನೂ ಒಳಗೊಂಡಿರಲಿದೆ.
ಪ್ಯಾರಾಚೂಟ್ ಆಧಾರಿತ ನಿಧಾನ ಚಲನೆ ವ್ಯವಸ್ಥೆಯು ಭೂಮಿಗೆ ಮರುಪ್ರವೇಶ ಮತ್ತು ಇಳಿಯುವಿಕೆ ಸಮಯದಲ್ಲಿ ಸಿಬ್ಬಂದಿ ಮಾಡ್ಯೂಲ್ನ ಸುರಕ್ಷತೆಯಲ್ಲಿ ಪ್ರಮುಖ ಅಂಶವಾಗಿದೆ.







