ಐಟಿ ಕಂಪೆನಿಗಳಲ್ಲಿ ಕನ್ನಡಿಗರ ಉದ್ಯೋಗ ವಿಚಾರ: ಮೋಹನ್ ದಾಸ್ ಪೈ ವಿರುದ್ಧ ಆಕ್ರೋಶ
ಸ್ಥಳೀಯರ ಹಿತಾಸಕ್ತಿಗೆ ಧ್ವನಿಯಾಗಲು ಕನ್ನಡಿಗರ ಆಗ್ರಹ

x.com/WHCongress
ಬೆಂಗಳೂರು: ಬೆಂಗಳೂರಿನ ಐಟಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಎಂಬ ಆರೋಪದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಎಚ್ಚರಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಚಾರದಲ್ಲಿ ಮುಖ್ಯಮಂತ್ರಿಯ ನಿಲುವನ್ನು ಹಲವರು ಬೆಂಬಲಿಸಿದ್ದು, ಉದ್ಯಮಿ ಮೋಹನ್ ದಾಸ್ ಪೈ ಅವರ ಪ್ರತಿಕ್ರಿಯೆಗೆ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅ. 25ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಐಟಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ ಹಾಗೂ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳು ದುರದೃಷ್ಟಕರ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಎಂದು ಪ್ರತಿಪಾದಿಸಿದ್ದ ಅವರು, ಖಾಸಗಿ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ತಾರತಮ್ಯ ಎಸಗಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮೋಹನ್ ದಾಸ್ ಪೈ, ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಭಾಗದಲ್ಲಿ ಉನ್ನತ ಶಿಕ್ಷಣದ ದಾಖಲಾತಿ ಅನುಪಾತ ಕಡಿಮೆಯಿದ್ದು, ಯುವಕರಲ್ಲಿ ಸಂವಹನ ಕೌಶಲಗಳ ಕೊರತೆಯಿದೆ ಎಂದು ಉಲ್ಲೇಖಿಸಿದ್ದರು. ಸರಕಾರಿ ಕಾಲೇಜುಗಳಲ್ಲಿ ಖಾಯಂ ಬೋಧಕರ ನೇಮಕ, ಸಂಶೋಧನೆಗೆ ಅನುದಾನ ಹಾಗೂ ಉತ್ತಮ ತರಬೇತಿ ಒದಗಿಸುವ ಮೂಲಕ ಕೃತಕ ಬುದ್ಧಿಮತ್ತೆಯ ಯುಗಕ್ಕೆ ಅಗತ್ಯವಾದ ಕೌಶಲ ಹೊಂದಿದ ಯುವಕರನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದರು.
ಆದರೆ, ಪೈ ಅವರ ಈ ಪ್ರತಿಕ್ರಿಯೆ ಸ್ಥಳೀಯರ ಉದ್ಯೋಗ ಹಕ್ಕುಗಳ ವಿಚಾರದಿಂದ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಟೀಕಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗದಲ್ಲಿ ತಾರತಮ್ಯವಾಗುತ್ತಿರುವ ಆರೋಪಕ್ಕೆ ನೇರವಾಗಿ ಸ್ಪಂದಿಸುವ ಬದಲು ಶಿಕ್ಷಣ ಮತ್ತು ಕೌಶಲದ ವಿಚಾರವನ್ನು ಮುನ್ನೆಲೆಗೆ ತರುವ ಮೂಲಕ ಅವರು ಮೂಲ ಸಮಸ್ಯೆಯಿಂದ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಕನ್ನಡಿಗರ ಹಿತಾಸಕ್ತಿಗಿಂತ ಉದ್ಯಮ ವಲಯದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪಗಳನ್ನೂ ಕೆಲವರು ಮಾಡಿದ್ದಾರೆ.
ಮೋಹನ್ ದಾಸ್ ಪೈ ಅವರನ್ನು ರಾಜ್ಯದ ಸಲಹಾ ಸಮಿತಿಗಳಿಂದ ತೆಗೆದುಹಾಕಬೇಕು ಎಂಬ ಆಗ್ರಹವೂ ಕೆಲವು ಪೋಸ್ಟ್ ಗಳಲ್ಲಿ ವ್ಯಕ್ತವಾಗಿದೆ. ಕನ್ನಡಿಗರ ಬಗ್ಗೆ ಅವರ ನಿಲುವನ್ನು ಪ್ರಶ್ನಿಸಿ, ರಾಜ್ಯದ ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಟೀಕಿಸಿದವರೂ ಇದ್ದಾರೆ.
ಮೋಹನ್ ದಾಸ್ ಪೈ ಅವರು ಪ್ರತಿಬಾರಿಯೂ ಕನ್ನಡಿಗರ ಹಿತಾಸಕ್ತಿಯ ಕುರಿತು ಚರ್ಚೆ ನಡೆಯುವಾಗ ಕನ್ನಡಿಗರ ಹಾಗೂ ಕನ್ನಡದ ಹಿತಾಸಕ್ತಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಎಂದೂ ಹಲವರು ಆರೋಪಿಸಿದ್ದಾರೆ.
ಬಾಬುರೆಡ್ಡಿ.ಎನ್ ಎಂಬವರು ಪ್ರತಿಕ್ರಿಯಿಸಿ, “ಬೇರೆ ರಾಜ್ಯದವರ ಕಾರ್ಪೊರೇಟ್ ಗುಲಾಮಗಿರಿ ಮಾಡೋದನ್ನು ಬಿಟ್ಟು, ಕೌಶಲ್ಯ ಇರೋ ನಮ್ಮ ಕನ್ನಡಿಗರಿಗೆ ಉದ್ಯೋಗ ನೀಡುವ ತಾಕತ್ತು ನಿಮಗಿದೆಯಾ? ಕನ್ನಡಿಗರ ವಿರುದ್ಧವೇ ನಿಲ್ಲುವ ನಿಮ್ಮ ಈ ದ್ವಂದ್ವ ನಿಲುವು ನಿಜಕ್ಕೂ ನಾಚಿಕೆಗೇಡು!” ಎಂದು ಬರೆದಿದ್ದಾರೆ.
ಅನ್ಯ ಭಾಷಿಕರ ಗುಂಪುಗಾರಿಕೆ ನಡೆಯುತ್ತಿದೆ: ಆರೋಪ
ಐಟಿ ನೇಮಕಾತಿಯಲ್ಲಿ ನಿರ್ದಿಷ್ಟ ರಾಜ್ಯಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ, ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಹಾಗೂ ಅರ್ಹತೆ ಇದ್ದರೂ ಕನ್ನಡಿಗರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ನೇಮಕಾತಿ ಮತ್ತು ಉದ್ಯೋಗ ಕಡಿತದಲ್ಲಿ ಕನ್ನಡಿಗರ ಪ್ರಮಾಣದ ಕುರಿತು ಅಂಕಿಅಂಶಗಳನ್ನು ಬಹಿರಂಗಪಡಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಬೆಂಗಳೂರಿನ ಕಚೇರಿಗಳು ಸೇರಿದಂತೆ ಹಲವು ಕಡೆ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಬದಲಾವಣೆ ಗಮನಕ್ಕೆ ಬರುತ್ತಿದೆ. ನೇಮಕಾತಿ ಮತ್ತು ಉದ್ಯೋಗ ಕಡಿತದಲ್ಲಿ ಕನ್ನಡಿಗರ ಪ್ರಮಾಣದ ಕುರಿತು ಕಂಪೆನಿಗಳಿಂದ ಅಂಕಿಅಂಶ ಪಡೆಯಬೇಕು ಎಂದೂ ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದ್ದಾರೆ.
ಸ್ಥಳೀಯರನ್ನು ನೇಮಕ ಮಾಡದಿದ್ದರೆ ಹೊರರಾಜ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಕಾರಣವನ್ನು ಸಂಸ್ಥೆಗಳು ಸ್ಪಷ್ಟಪಡಿಸುವಂತಾಗಬೇಕು. ಕನ್ನಡ ಪರೀಕ್ಷೆ ಕಡ್ಡಾಯಗೊಳಿಸುವುದು ಸೇರಿದಂತೆ ಸ್ಥಳೀಯ ಭಾಷೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಚರ್ಚೆ ನಡೆಸಬೇಕು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.






