ಕಾಂಗ್ರೆಸ್ ಗೆ ಪ್ರತ್ಯುತ್ತರ ಕೊಡುವ ಶಕ್ತಿ ಜೆಡಿಎಸ್, ಬಿಜೆಪಿ ಪಕ್ಷಕ್ಕೆ ಇದೆ: ಹೆಚ್.ಡಿ. ದೇವೇಗೌಡ
"ಇಂಡಿಯಾ ಒಕ್ಕೂಟ ನಮ್ಮನ್ನ ಹೊರಗಿಟ್ಟ ಮೇಲೆ ಮೋದಿ, ಅಮಿತ್ ಶಾ ನಮ್ಮನ್ನ ಸ್ವಾಗತಿಸಿದರು"

ಹಾಸನ: ಕಾಂಗ್ರೆಸ್ ಗೆ ಪ್ರತ್ಯುತ್ತರ ಕೊಡುವ ಶಕ್ತಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಕ್ಕಿದ್ದು, ಮೋದಿಯವರ ನಾಯಕತ್ವದಲ್ಲಿ ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ಮೈತ್ರಿ ಮೂಲಕ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಸ್ಪರ್ದೆ ಮಾಡುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದರು.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ನಾನು ಮೊನ್ನೆ ಸಮೀಕ್ಷೆಗಳ ಬಗ್ಗೆ ಮಾತನಾಡಿದ್ದೆ. ಎನ್‌ಡಿಎಗೆ ಪರ್ಯಾಯವಾಗಿ ಇಂಡಿಯಾ ಒಕ್ಕೂಟ 46 ಪ್ರಾದೇಶಿಕ ಪಕ್ಷಗಳು ಸೇರಿ ಮಾಡಿಕೊಂಡಿವೆ. ಕಾಂಗ್ರೆಸ್ ಅದರ ನೇತೃತ್ವದಲ್ಲಿ ವಹಿಸಿಕೊಂಡಿದ್ದರಿಂದ ನಮ್ಮನ್ನು ಅದರಿಂದ ಹೊರಗಿಟ್ಟಿದ್ದಾರೆ. ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಬಿಜೆಪಿಯನ್ನ ಹೊರತುಪಡಿಸಿ ಎಲ್ಲಾ ಸೆಕ್ಯುಲರ್ ಪಾರ್ಟಿಯವರೂ ಕರ್ನಾಟಕದಲ್ಲಿ ಭಾಗಿಯಾಗಿದ್ದರು. ಇಂಡಿಯಾ ಒಕ್ಕೂಟ ನಮ್ಮನ್ನ ಹೊರಗಿಟ್ಟ ಮೇಲೆ ಮೋದಿ ಮತ್ತು ಅಮಿತ್ ಶಾ ನಮ್ಮನ್ನ ಸ್ವಾಗತ ಮಾಡಿದ್ದಾರೆ. ನಮ್ಮನ್ನ ಹೊರಗೆ ದೂಡಿದ್ದು, ಕಾಂಗ್ರೆಸ್. ಜೆಡಿಎಸ್ ಲೆಕ್ಕಕ್ಕಿಲ್ಲ. ಆಟಕ್ಕಿಲ್ಲ ಕೆಲ ದಿನಗಳಲ್ಲಿ ಜೆಡಿಎಸ್ ಇರೋದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಲಘುವಾಗಿ ಮಾತನಾಡಿದ್ದರು. ಮೋದಿಯವರು ವೈಯುಕ್ತಿಕವಾಗಿ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ನ ನಡವಳಿಕೆಯನ್ನ ಸೂಕ್ಷ್ಮವಾಗಿ ಗಮನಿಸಿ, ನಮ್ಮನ್ನ ಅವರ ಜೊತೆ ಸ್ವಾಗತಿಸಿದ್ದಾರೆ.
ಈ ಪಕ್ಷ ಮುಗಿಸಲೇಬೇಕು ಎಂದಾಗ ಮೋದಿಯವರು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮೋದಿಯವರು, ಶಾ, ನಡ್ಡಾ ವಿಜಯೇಂದ್ರ, ಅಶೋಕ್ ಎಲ್ಲರೊಂದಿಗೆ ಚರ್ಚಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭವಾನಿ ರೇವಣ್ಣ ಅವಾಚ್ಯ ನಿಂದನೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸುಮ್ಮನೆ ಯಾಕೆ ಚರ್ಚೆ ಮಾಡುತ್ತೀರಿ, ಅವರಿಗೆ ಆರೋಗ್ಯ ಸರಿ ಇಲ್ಲ. ಅವರಿಗೆ ಮಂಡಿ ಆಪರೇಷನ್ ಆಗಿದೆ ಎಂದು ಹೇಳಿಕೆ ನೀಡುವುದರ ಮೂಲಕ ರಾಜಕೀಯ ಬೆಳವಣಿಗೆಯನ್ನು ತಳ್ಳಿಹಾಕಿದರು.







