ಹೈಕೋರ್ಟ್ ಆದೇಶದ ಬೆನ್ನಲ್ಲೇ ‘ಸಾರಿಗೆ ಮುಷ್ಕರ’ ಹಿಂಪಡೆದ ಜಂಟಿ ಕ್ರಿಯಾ ಸಮಿತಿ

ಸಾಂದರ್ಭಿಕ ಚಿತ್ರ
ಬೆಂಗಳೂರು: ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮೇ 20 ರಂದು ನಿಗದಿಯಾಗಿದ್ದ ಸಾರಿಗೆ ನೌಕರರ ಮುಷ್ಕರವನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಿಂಪಡೆದಿದ್ದು, ಸಾರಿಗೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ.
ಮಂಗಳವಾರ ನಗರದ ಶೇಷಾದ್ರಿಪುರಂನಲ್ಲಿರುವ ಎಐಟಿಯುಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಬಿ.ಜಯದೇವರಾಜೇ ಅರಸು, ‘ಮೇ 20ರಿಂದ ನಡೆಯಬೇಕಿದ್ದ ಸಾರಿಗೆ ಮುಷ್ಕರದ ಕುರಿತು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಯ ವಿಚಾರಣೆ ನಡೆಸಿ ಹೈಕೋರ್ಟ್ ಮುಷ್ಕರವನ್ನು ಹಿಂಪಡೆಯಬೇಕು ಎಂದು ಆದೇಶ ಹೊರಡಿಸಿದೆ.
ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜಂಟಿ ಕ್ರಿಯಾ ಸಮಿತಿಯ ಸಭೆ ನಡೆಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಹೈಕೋರ್ಟ್ ಆದೇಶದ ಪ್ರಕಾರ ಸಾರಿಗೆ ಮುಷ್ಕರವನ್ನು ಹಿಂಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸರಕಾರ, ಹೈಕೋರ್ಟ್ ಆದೇಶದ ಪ್ರಕಾರ ಶೀಘ್ರವಾಗಿ ಸಭೆ ನಡೆಸಿ, ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಕುರಿತು ನಮಗೆ ಒಪ್ಪಿಗೆಯಾಗುವ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು. ಸರಕಾರ ಸಭೆ ನಡೆಸಿದ ನಂತರ ಜಂಟಿ ಕ್ರಿಯಾ ಸಮಿತಿಯ ಮುಖಂಡರು ಸಭೆ ಸೇರಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ. ಮಾತನಾಡಿ, ‘ಸಾರಿಗೆ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೊಂದಿಗೆ ಸಭೆ ನಡೆಸಲು ಅವಕಾಶ ಕೊಡಲಿಲ್ಲ ಎನ್ನುವುದು ನಮ್ಮ ದೂರು. ಆದರೆ, ಇದೀಗ ಯಾರೋ ಹಾಕಿರುವ ಪಿಐಎಲ್ನಿಂದ ಮುಖ್ಯಮಂತ್ರಿ ಜೊತೆಗೆ ಸಭೆ ನಡೆಸಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಈಗ ನಮಗೆ ಹೈಕೋರ್ಟ್ ನಮಗೆ ಒಂದು ಅವಕಾಶ ಮಾಡಿಕೊಟ್ಟಿದೆ. ಅವಕಾಶವನ್ನು ನಾವು ಉಪಯೋಗಿಸಿಕೊಂಡು ಶೇ.12.5ರಷ್ಟು ಮೂಲ ವೇತನ ಹೆಚ್ಚಳವನ್ನು ಕನಿಷ್ಟ ಶೇ.15ರಷ್ಟು ಹೆಚ್ಚಿಸಿ, 2024ರ ಜ.1ರಿಂದ ನಾಲ್ಕು ವರ್ಷಗಳ ಅವಧಿಗೆ ಜಾರಿಗೊಳಿಸುವಂತೆ ಒತ್ತಾಯಿಸುತ್ತೇವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್, ಕರ್ನಾಟಕ ರಾಜ್ಯ ಸಾರಿಗೆ ನೌಕರರ ಫೆಡರೇಷನ್(ಸಿಐಟಿಯು) ಅಧ್ಯಕ್ಷ ಎಚ್.ಡಿ.ರೇವಪ್ಪ, ವಿಶ್ವ ಕಾರ್ಮಿಕರ ಕೂಟದ ಗಂಡಸಿ ಸದಾನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು
► 2022ರ ಜು.1ರಲ್ಲಿದ್ದ ಶೇ.31 ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ವಾರ್ಷಿಕ ಬಡ್ತಿಯನ್ನು 2024ರ ಜ.25ರ ಬೇಡಿಕೆ ಪಟ್ಟಿಯಲ್ಲಿರುವಂತೆ ಹೆಚ್ಚಿಸಿ ವೇತನ ಶ್ರೇಣಿ ರಚಿಸಬೇಕು.
►2020ರ ಜ.1ರಿಂದ ಡಿ.12ರ ವರೆಗಿನ 12 ತಿಂಗಳುಗಳ ಉಳಿದಿರುವ ಬಾಕಿ ಹಣವನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರಿಗೆ ಪಾವತಿಸಬೇಕು.
►26 ತಿಂಗಳುಗಳ ಬಾಕಿ ಹಣ 1,270ಕೋಟಿ ರೂ. ಒಂದೇ ಕಂತಿನಲ್ಲಿ ಪಾವತಿಸಬೇಕು.
►ಫಾರಂ-4 ಮತ್ತಿತರರ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿಯೊಂದಿಗೆ ಚರ್ಚಿಸಿ ಬಗೆಹರಿಸಬೇಕು.
ʼಕಾರ್ಮಿಕರ ಪರ ತೀರ್ಪುಗಳನ್ನು ಜಾರಿ ಮಾಡುವುದಿಲ್ಲʼ:
‘ಕಾರ್ಮಿಕರ ಪರವಾದ ಕೋರ್ಟ್ ತೀರ್ಪುಗಳನ್ನು ಸರಕಾರಗಳು ಅವುಗಳನ್ನು ಜಾರಿಮಾಡುವುದಿಲ್ಲ. ಆದರೆ, ಕಾರ್ಮಿಕರ ವಿರುದ್ಧ ತೀರ್ಪು ಬಂದರೆ ತಕ್ಷಣವೇ ಅವುಗಳನ್ನು ಜಾರಿ ಮಾಡಲು ಮುಂದಾಗುತ್ತವೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಪ್ರದಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ತಿಳಿಸಿದ್ದಾರೆ.
ಮಂಗಳವಾರ ನಗರದ ಸೂರಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ ದರ್ಜೆಯ ಸರಕಾರಿ ನೌಕರರಿಗೆ 27 ಸಾವಿರ ರೂ. ಮೂಲ ವೇತನವಿದ್ದರೆ ಸಾರಿಗೆ ನೌಕರರಿಗೆ ಕೇವಲ 18 ಸಾವಿರ ರೂ.ಮಾತ್ರವಿದೆ. ಶೇ.12.5 ಮೂಲ ವೇತನ ಹೆಚ್ಚಳ ಹಾಗೂ ಇತರೆ ಭತ್ಯೆಗಳನ್ನು ಸೇರಿಸಿದರೆ ಸರಾಸರಿ ತಿಂಗಳಿಗೆ 4 ಸಾವಿರ ರೂ.ಮಾತ್ರ ಹೆಚ್ಚಳವಾಗುತ್ತದೆ. ಇದು 4 ವರ್ಷಗಳಿಗೆ ಸಿಗುವ ವೇತನ ಹೆಚ್ಚಳವಾಗಿದ್ದು, ಇಂದಿನ ಬೆಲೆಯೇರಿಕೆಗೆ ಅನುಗುಣವಾಗಿಲ್ಲ ಎಂದು ತಿಳಿಸಿದರು.
ಸಾರಿಗೆ ನೌಕರರು ಬೆಲೆಯೆರಿಕೆ ಆಧಾರದಲ್ಲಿ ಶೇ.25ರಷ್ಟು ವೇತನ ಪರಿಷ್ಕರಣೆ ಕೇಳಿದರೆ ಸರಕಾರ ಕೇವಲ ಶೇ.12.50 ಮಾತ್ರ ಎಂದು ವಾದಿಸುತ್ತಿದೆ. ಬೆಲೆಯೇರಿಕೆಯ ಆಧಾರದಲ್ಲಿ ಶೇ.25ರಷ್ಟು ವೇತನ ಪರಿಷ್ಕರಣೆ ಮಾಡಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾರಿಗೆ ನೌಕರರ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ, ಮುಖಂಡರಾದ ಮಾಲಿನಿ ಮೇಸ್ತಾ, ರಾಘವೇಂದ್ರ ಮತ್ತಿತರರು ಹಾಜರಿದ್ದರು.






