ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ: ನ್ಯಾ.ಕೆ.ಎನ್.ಕೇಶವ ನಾರಾಯಣ ಆಯೋಗದ ಶಿಫಾರಸ್ಸು ತಿರಸ್ಕಾರ

ಡಿವೈಎಸ್ಪಿ ಎಂ.ಕೆ.ಗಣಪತಿ (File Photo)
ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎನ್.ಕೇಶವ ನಾರಾಯಣ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸನ್ನು ಸಚಿವ ಸಂಪುಟ ತಿರಸ್ಕರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2016ರ ಜು.7ರಂದು ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಆನಂತರ, ಮುಖ್ಯಮಂತ್ರಿಯ ಆದೇಶದಂತೆ ಈ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್.ಕೇಶವ ನಾರಾಯಣ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಲಾಗಿತ್ತು ಎಂದು ಹೇಳಿದರು.
ವಿಚಾರಣಾ ಆಯೋಗವು 2018ರ ಫೆ.26ರಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಆ ವರದಿಯಲ್ಲಿನ 8 ಭಾಗಗಳ ಕುರಿತು ಅಧ್ಯಯನ ನಡೆಸಿ ಆ ವರದಿಯಲ್ಲಿನ ಎಲ್ಲ ಅಂಶಗಳು ಹಾಗೂ ಶಿಫಾರಸ್ಸುಗಳನ್ನು ಪರಿಶೀಲಿಸಿ ಅಧ್ಯಯನ ವರದಿಯನ್ನು ನೀಡಲು ಸರಕಾರವು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಂ.ಕೆ.ಶ್ರೀವಾಸ್ತವ್ ಅವರನ್ನು ನೇಮಿಸಿತ್ತು ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಹಿಂದಿನ ಗೃಹ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣವ್ ಮೊಹಂತಿ ವಿರುದ್ಧ ಗಣಪತಿ ಸಂದರ್ಶನದಲ್ಲಿ ಆರೋಪಿಸಿರುವುದನ್ನು ತಳ್ಳಿ ಹಾಕಿ, ಗಣಪತಿ ಆತ್ಮಹತ್ಯೆಗೆ ಇವರು ಕಾರಣವಲ್ಲ ಎಂಬ ಅಭಿಪ್ರಾಯವನ್ನು ಕೇಶವ ನಾರಾಯಣ ಆಯೋಗವು ಸ್ಪಷ್ಟವಾಗಿ ಹೇಳಿದೆ ಎಂದು ಅವರು ತಿಳಿಸಿದರು.
ಎಂ.ಕೆ.ಶ್ರೀವಾಸ್ತವ್ ಸರಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ತನಿಖಾ ಕ್ರಮಗಳ ಬಗ್ಗೆ ವಿಚಾರಣಾ ಆಯೋಗವು ಮಾಡಿರುವ ಆಕ್ಷೇಪಣೆಗಳನ್ನು, ಸಿಬಿಐ ಸಲ್ಲಿಸಿರುವ ವರದಿಯನ್ನು ಹೈಕೋರ್ಟ್ ಮಾನ್ಯ ಮಾಡಿರುವುದರಿಂದ ಮತ್ತು ಸುಪ್ರಿಂಕೋರ್ಟ್ ಎಸ್.ಎಲ್.ಪಿ ಯಲ್ಲಿ ಸಿ.ಬಿ.ಐ ಪ್ರಕರಣವನ್ನು ಮುಕ್ತಾಯ ಮಾಡಿರುವುದನ್ನು ಎತ್ತಿ ಹಿಡಿದಿರುವುದರಿಂದ, ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆಯ ಶಿಫಾರಸ್ಸನ್ನು ಒಪ್ಪುವ ಅಗತ್ಯವಿಲ್ಲವೆಂದು ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ಆದುದರಿಂದ, ಕೇಶವ ನಾರಾಯಣ ಆಯೋಗವು ಸಲ್ಲಿಸಿರುವ ವಿಚಾರಣಾ ವರದಿಯನ್ನು ಸಂಪುಟವು ಭಾಗಶಃ ಒಪ್ಪಿ, ಕೆಲವು ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಇಲಾಖಾ ತನಿಖೆ ಮಾಡಬೇಕು ಎಂದು ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.







