ಪರಿಷತ್ ಚುನಾವಣೆಯಲ್ಲಿ ಸೋಲು ಹಿನ್ನೆಲೆ; 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು: ಕೆ.ಎನ್.ರಾಜಣ್ಣ

ಬೆಂಗಳೂರು : ಇತ್ತೀಚಿಗೆ ನಡೆದ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ 26 ವಿಧಾನಸಭಾ ಕ್ಷೇತ್ರದ ಶಾಸಕರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ಸೋಲಿನ ಹಿನ್ನೆಲೆಯಲ್ಲಿ ನನ್ನನ್ನು ಸೇರಿದಂತೆ ಸೋಲಿನ ಜವಾಬ್ದಾರಿ ಹೊತ್ತು ಶಾಸಕರು ರಾಜೀನಾಮೆ ನೀಡಬೇಕು. ನಾವು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ ಎಂದರೆ 26 ಜನವೂ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕಾಗಿದೆ ಎಂದರು.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 35 ವಿಧಾನಸಭಾ ಕ್ಷೇತ್ರದಲ್ಲಿ 26 ಜನ ನಾವೇ ಶಾಸಕರು ಅಧಿಕಾರದಲ್ಲಿದ್ದೇವೆ. ಹಾಗೆ ನೋಡಿದರೆ ನಾವೆಲ್ಲ ರಾಜೀನಾಮೆ ಕೊಡಬೇಕು. ಪಕ್ಷ ನಿರ್ಣಯ ತೆಗೆದುಕೊಂಡಿದ್ದಾಗ ಶಾಸಕರು ಅದನ್ನು ಜವಾಬ್ದಾರಿಯನ್ನು ತೆಗೆದುಕೊಂಡು ಮಾಡಬೇಕು. ನಾವು ಕೂಡ ಇದರಲ್ಲಿ ತಪ್ಪು ಮಾಡಿದ್ದೇವೆ ಎಂದು ಅವರು ಉಲ್ಲೇಖಿಸಿದರು.
ಸ್ಟಿಂಗ್ ವಿಚಾರ ಈ ಚುನಾವಣೆ ಮೇಲೆ ಪರಿಣಾಮ ಬೀರಿದೆ. ವಿದ್ಯಾವಂತರು ಮತ ಚಲಾವಣೆ ಮಾಡುವ ವೇಳೆ ಪ್ರತಿಯೊಂದು ವಿಚಾರವನ್ನು ತುಲನೆ ಮಾಡುತ್ತಾರೆ. ತಮ್ಮ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸಿರುವ ಸಾಧ್ಯತೆ ಇದೆ ಎಂದ ಅವರು, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರ ಭೇಟಿ ವಿಚಾರದ ಬಗ್ಗೆ ನಾನು ಕೂಡ ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಸಿದ್ದರಾಮಯ್ಯನವರ ಜೊತೆಗೆ ಅವರು ಹೊಸದಿಲ್ಲಿಗೆ ಹೋಗುವ ಮೊದಲು ಮಾತನಾಡಿದ್ದೆ. ಹೋಗಿ ಬಂದ ಬಳಿಕ ಮಾತಾಡಿಲ್ಲ ಎಂದರು.






