ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ವರದಿ ಸಲ್ಲಿಕೆ

ಬೆಳಗಾವಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಚಿಸಲಾಗಿದ್ದ ಶಿಕ್ಷಣ ತಜ್ಞರ ಸಮಿತಿಯು ತನ್ನ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಲ್ಲಿಸಿತು.
ವರದಿಯ ಮುಖ್ಯಾಂಶಗಳು:
ಕಲ್ಯಾಣ ಕರ್ನಾಟಕ ಪ್ರದೇಶವು ತನ್ನ ವ್ಯಾಪ್ತಿಯಲ್ಲಿರುವ ಒಟ್ಟು ಶಾಲೆಗಳಲ್ಲಿ, ಸರಕಾರಿ ಶಾಲೆಗಳ ಪಾಲು (57.35%) ಹೊಂದಿದ್ದು, ನಂತರದ ಸ್ಥಾನದಲ್ಲಿ ಖಾಸಗಿ ಶಾಲೆಗಳು (33.42%) ಇವೆ.
ಮುಂದಿನ ತರಗತಿಗಳಿಗೆ ತೇರ್ಗಡೆ ಹೊಂದುವ ವಿದ್ಯಾರ್ಥಿಗಳ ಪ್ರಮಾಣ 7ನೇ ತರಗತಿ ಬಳಿಕ ನಿರಂತರವಾಗಿ ಕಡಿಮೆಯಾಗುತ್ತಿದೆ. 9 ರಿಂದ 10ನೇ ತರಗತಿಗೆ ತೇರ್ಗಡೆ ಶೇ.12ರಷ್ಟು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ.
ಈ ಪ್ರದೇಶದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 17,274 ಹುದ್ದೆಗಳು (ಒಟ್ಟು ಹುದ್ದೆಗಳ 38.2%) ಮತ್ತು ಪ್ರೌಢಶಾಲಾ ಶಿಕ್ಷಕರ 4,107 ಹುದ್ದೆಗಳು (34.8%) ಖಾಲಿ ಇರುತ್ತವೆ. ಇದರಿಂದ ಪ್ರಾಥಮಿಕ ಹಂತದಿಂದಲ್ಲೇ ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತಿದೆ.
ಈ ಪ್ರದೇಶದ ಮೊದಲ ಹಂತದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಉತ್ತೀರ್ಣ ಪ್ರಮಾಣವು 53.40 ಶೇಕಡಾ ಆಗಿದ್ದು, ರಾಜ್ಯದ ಸರಾಸರಿ 66.14 ಶೇಕಡಾ ಆಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿ ಅತಿ ಕಡಿಮೆ – 42.43 ಶೇಕಡಾ ಆಗಿದೆ. ರಾಜ್ಯ ಮಟ್ಟದಲ್ಲಿ ಮೂರು ಪರೀಕ್ಷೆಗಳ ಸರಾಸರಿ ಫಲಿತಾಂಶ 79.97 ಶೇಕಡಾ ಆಗಿದ್ದು, ವಿಜಯನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳು ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶ ದಾಖಲಿಸಿವೆ.
ಕಡಿಮೆ ಸಾಧನೆಗೆ ಕಾರಣಗಳು:
ವಿಷಯ ಶಿಕ್ಷಕರನ್ನೂ ಒಳಗೊಂಡಂತೆ ಶಿಕ್ಷಕರ ಕೊರತೆ ಇರುವುದು, ಬೋಧನಾ ವಿಧಾನಗಳಲ್ಲಿ ಕಡಿಮೆ ಮಟ್ಟದ ಸಾಮರ್ಥ್ಯ ವೃದ್ಧಿ, ಸೂಕ್ತ ತರಬೇತಿಯಿಲ್ಲದ ಅತಿಥಿ ಶಿಕ್ಷಕರೇ ಹೆಚ್ಚಾಗಿರುವುದು, ಪರಿಣತ ಅಧ್ಯಾಪಕರ ಕೊರತೆಯಿಂದಾಗಿ ಡಯಟ್ ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯ ಕೊರತೆ, ಬಿಆರ್ಸಿ ಮತ್ತು ಸಿಆರ್ಸಿ ಗಳಿಂದ ಸಮರ್ಪಕ ಗುಣಮಟ್ಟದ ಶೈಕ್ಷಣಿಕ ಮಾರ್ಗದರ್ಶನದ ಕೊರತೆ, ಹಾಗೂ ಶಾಲಾ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ಪರಿಶೀಲನೆಯಲ್ಲಿ ದುರ್ಬಲತೆ ಇರುವುದು ಫಲಿತಾಂಶ ಕಳಪೆಯಾಗಲು ಕಾರಣವಾಗಿವೆ ಎಂದು ಸಮಿತಿ ತಿಳಿಸಿದೆ..
ಸಮಿತಿಯ ಪ್ರಮುಖ ಶಿಫಾರಸ್ಸುಗಳು:
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತರಬೇತಿ ಪಡೆದ ಶಿಕ್ಷಕರ ಲಭ್ಯತೆ ಖಚಿತಪಡಿಸಲು ವರ್ಗಾವಣೆ ನೀತಿಯ ಪರಿಶೀಲನೆ ನಡೆಸುವ ಅಗತ್ಯವಿದೆ.
ಮೂಲಭೂತ ಸಾಕ್ಷರತೆ ಮತ್ತು ಗಣಿತಜ್ಞತೆ ಕಾರ್ಯಕ್ರಮದ ಪರಿಣಾಮಕಾರಿ ಮತ್ತು ಫಲಿತಾಂಶಾಧಾರಿತ ಅನುಷ್ಠಾನಕ್ಕೆ ತಂತ್ರ ರೂಪಿಸುವುದು.
ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶ ಸುಧಾರಿಸಲು ಸಾಧ್ಯವಿರುವ ಮತ್ತು ಕಾರ್ಯನಿರ್ವಹಣೆಯಲ್ಲಿರುವ ಕಡೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸುವುದು.
ಕೆಳ ಹಂತದಲ್ಲಿ ಕಲಿಕಾ ಪ್ರಕ್ರಿಯೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು. 1–3ನೇ ತರಗತಿಗಳಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ತರಗತಿಗಳಲ್ಲಿಯೂ ಅವುಗಳನ್ನು ನಿರಂತರವಾಗಿರಿಸುವುದು. ಮಧ್ಯವರ್ತಿ ಕಲಿಕಾ ವಿಧಾನಗಳು 4ನೇ ತರಗತಿಯಿಂದ ಆರಂಭವಾಗಬೇಕು. ನಿಧಾನ ಕಲಿಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬೆಂಬಲ ಒದಗಿಸಬೇಕು.
ಶಾಲೆಗಳು ಮತ್ತು ಶಿಕ್ಷಕರಿಗೆ ಕಲಿಕಾ ಫಲಿತಾಂಶ ಗುರಿಗಳೊಂದಿಗೆ ಸ್ವಾಯತ್ತತೆ ಮತ್ತು ಜವಾಬ್ದಾರಿ ನೀಡುವುದು ಹಾಗೂ ಶಾಲೆಗಳಿಗೆ ನಿರ್ದಿಷ್ಟ ಕಾರ್ಯಯೋಜನೆಗಳನ್ನು ರೂಪಿಸುವುದು.
ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಬೇಡಿಕೆ ಇದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಥವಾ ಸಮರ್ಪಕ ಇಂಗ್ಲಿಷ್ ಜ್ಞಾನ ಹೊಂದಿದ ಶಿಕ್ಷಕರನ್ನು ಈ ತರಗತಿಗಳಿಗೆ ವರ್ಗಾಯಿಸಬೇಕು. ಆರಂಭಿಕ ಬಾಲ್ಯ ಶಿಕ್ಷಣವನ್ನು ಐಸಿಡಿಎಸ್ ಜೊತೆ ಸಂಯೋಜಿಸಿ ಜಾರಿ ಮಾಡಬೇಕು.
ಪ್ರಸ್ತುತ ನಲಿ–ಕಲಿ ಕಾರ್ಯಕ್ರಮದಲ್ಲಿ ಅನೇಕ ಶೈಕ್ಷಣಿಕ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳಲ್ಲಿ ಕೊರತೆಗಳಿದ್ದು, ಇದನ್ನು ಸುಧಾರಿಸಬೇಕು.
ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಈ ಪ್ರದೇಶದಲ್ಲಿ ಹೆಚ್ಚಿನ ಉಪಯೋಗ ಮತ್ತು ಸಾಮರ್ಥ್ಯ ಹೊಂದಿದ್ದು, ಇದು ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ಕಡಿಮೆ ಮಾಡುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 350 ಕೆಪಿಎಸ್ ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ, ಇದರಲ್ಲಿ 200 ಶಾಲೆಗಳನ್ನು ಮಂಡಳಿಯಡಿಯಲ್ಲಿ ಸ್ಥಾಪಿಸಬೇಕು.
ವಿಜಯನಗರ ಜಿಲ್ಲೆಯಲ್ಲಿ DIET ಸ್ಥಾಪಿಸಬೇಕು. ಹೆಚ್ಚಿನ ದಾಖಲಾತಿಯಿರುವ ಹೊಸ ತಾಲ್ಲೂಕುಗಳಲ್ಲಿ 14 ಬಿಇಒ ಕಚೇರಿಗಳನ್ನು ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ.
ಶಾಲೆ ಬಿಡುವುದು ಮತ್ತು ಗೈರುಹಾಜರಿ ಕಡಿಮೆ ಮಾಡಲು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಹಾಗು ಸಿದ್ದತೆ ತಡೆಯಲು ಸಮುದಾಯದ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ.
ಯೋಜನೆಗಳ ಪರಿಣಾಮಗಳ ಮೌಲ್ಯಮಾಪನ, ಶಾಲಾ ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಶಿಕ್ಷಣ ಗುರಿಗಳನ್ನು ಆಧರಿಸಿ ದೀರ್ಘಕಾಲೀನ ಯೋಜನೆ ಸಿದ್ಧ ಪಡಿಸಬೇಕು. ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನದ ಗುಣಮಟ್ಟ ಪರಿಶೀಲನೆಯನ್ನು ಎರಡು ವರ್ಷಕ್ಕೊಮ್ಮೆ ನಡೆಸಬೇಕು
ಎಲ್ಲಾ ಸರಕಾರಿ ಶಾಲೆಗಳಲ್ಲಿ ಕಲಿಕಾ ಖಾತರಿ ಕಾರ್ಯಕ್ರಮವನ್ನು ಕೆಕೆಆರ್ಡಿಬಿ ವತಿಯಿಂದ ಜಾರಿಗೆ ತರಲು ಶಿಫಾರಸ್ಸು ಮಾಡಲಾಗಿದೆ. ಹಾಜರಾತಿ ಮತ್ತು ಕಲಿಕಾ ಫಲಿತಾಂಶ ಗುರಿಗಳನ್ನು ಸಾಧಿಸಿದ ಶಾಲೆಗಳಿಗೆ ಪ್ರಶಸ್ತಿ ಮತ್ತು ಗೌರವ ನೀಡುವ ಮೂಲಕ ಉತ್ತಮ ಸಾಧನೆ ಮಾಡುವ ಶಾಲೆಗಳು, ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಕಾರ್ಯನಿರ್ವಹಕರನ್ನು ಉತ್ತೇಜಿಸುವ ಕಾರ್ಯಕ್ರಮ ಇದಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ತನ್ನ ಒಟ್ಟು ಬಜೆಟ್ನ ಶೇ. 2 5ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಮಗ್ರ ಮತ್ತು ಗುಣಮಟ್ಟದ ಶಿಕ್ಷಣ ಅಭಿವೃದ್ಧಿಗೆ ತಜ್ಞರ ಸಲಹೆ ಪಡೆಯುವ ಉದ್ದೇಶದಿಂದ, ಸರಕಾರ ಫೆಬ್ರವರಿ 2025ರಲ್ಲಿ ಶಿಕ್ಷಣ ತಜ್ಞರಾದ ಡಾ.ಛಾಯಾ ದೇಗಾಂವಕರ ಅಧ್ಯಕ್ಷತೆಯಲ್ಲಿ ಡಾ.ಅಬ್ದುಲ್ ಖಾದಿರ್, ಮಲ್ಲಿಕಾರ್ಜುನ ಎಂ.ಎಸ್., ಫಾ.ಫ್ರಾನ್ಸಿಸ್ ಬಾಷ್ಯಂ, ಡಾ.ರುದ್ರೇಶ್ ಎಸ್., ಎನ್.ಬಿ. ಪಾಟೀಲ್, ಯಶವಂತ್ ಹರಸೂರ್ ಮತ್ತು ಡಾ. ನಾಗಬಾಯಿ ಬಿ. ಬುಳ್ಳಾ ಇವರನ್ನು ಒಳಗೊಂಡು ಸಮಿತಿಯನ್ನು ರಚಿಸಿತ್ತು. ಸಮಿತಿಯು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸುಮಾರು 100 ಸರಕಾರಿ ಶಾಲೆಗಳ ಕ್ಷೇತ್ರ ಭೇಟಿಗಳ ಮೂಲಕ ಮಾಹಿತಿ ಪಡೆದು ಸಮಗ್ರ ಅಧ್ಯಯನ ವರದಿಯನ್ನು ಸಿದ್ದಪಡಿಸಿದೆ.







