ಜೈನ ಸಂಪ್ರದಾಯದಂತೆ ಕಾಮಕುಮಾರ ನಂದಿ ಮಹಾರಾಜ ಅಂತ್ಯಕ್ರಿಯೆ

ಬೆಳಗಾವಿ: ದುಷ್ಕರ್ಮಿಗಳಿಂದ ಕೊಲೆಯಾಗಿರುವ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜ (51) ಅವರ ಅಂತ್ಯಕ್ರಿಯೆ ಇಲ್ಲಿನ ನಂದಿ ಪರ್ವತ ಆಶ್ರಮದಲ್ಲಿ ಜೈನ ಸಂಪ್ರದಾಯದಂತೆ ಜರುಗಿತು.
ರವಿವಾರ ಬೆಳಗ್ಗೆ ಜೈನ ಮಠಗಳ ಮಹಾಸ್ವಾಮಿಗಳಾದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಹಾಗೂ ವರೂರ್ ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಜೈನ ಧರ್ಮದ ಧಾರ್ಮಿಕ ವಿಧಿ-ವಿಧಾನಗಳಂತೆ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆ ನೆರವೇರಿತು.
ಅಂತ್ಯಕ್ರಿಯೆ ಸ್ಥಳವನ್ನು ಭಟ್ಟಾರಕ ಶ್ರೀಗಳಿಂದ ಮೊದಲಿಗೆ ಗುರುತಿಸಿ ಶುದ್ಧೀಕರಣ ಮಾಡಿ, ಯಜ್ಞ ಪೂಜೆ ನಂತರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಜಿನೈಕ್ಯರಾದ ಕಾಮಕುಮಾರ ನಂದಿ ಮಹಾರಾಜರು ಉಪಯೋಗಿಸುತ್ತಿದ್ದ ಪಿಂಚಿ, ಕಮಂಡಲು ತೆಂಗಿನ ಮರಕ್ಕೆ ಕಟ್ಟಿ ಅಂತಿಮ ವಿಧಿ ವಿಧಾನಗಳನ್ನು ಮುಂದುವರಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವಾಶ್ರಮದ ಮೃತ ಶ್ರೀಗಳ ಅಣ್ಣನ ಮಗ ಭೀಮಗೊಂಡ ಉಗಾರೆ ಅಂತಿಮ ವಿಧಿವಿಧಾನ ನೆರವೇರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ‘ಕಾಮಕುಮಾರ ನಂದಿ ಸ್ವಾಮೀಜಿ ಅವರ ಅಂತ್ಯಕ್ರಿಯೆ ಸಂಪನ್ನವಾಗಿದೆ. ಈ ಹತ್ಯೆಯನ್ನು ಖಂಡಿಸಿ ನಾವು ಜು.10ರಂದು ಚಿಕ್ಕೋಡಿ ಆರ್‍ಡಿಪಿ ಕಾಲೇಜಿನಿಂದ 10 ಗಂಟೆಗೆ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.
ಕಠಿಣ ಶಿಕ್ಷೆ: ‘ನಾವು ಕಷ್ಟ ಬಂದರು ಯಾರಿಗೂ ನೋಯಿಸದೆ ಜೀವನ ಮಾಡುತ್ತೇವೆ. ನಮಗೆ ಇವತ್ತು ಇಂತಹ ಕಷ್ಟ ಬಂದಿದೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಸಾಧು ಸಂತರಿಗೆ ಸರಕಾರ ರಕ್ಷಣೆ ನೀಡಬೇಕು. ಇಂತಹ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.
ಭಕ್ತರ ಆಕ್ರಂದನ..: ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ಎರಡು ದಿನದ ಹಿಂದೆ ಹತ್ಯೆಗೀಡಾಗಿದ್ದರು. ರವಿವಾರ ಚಿಕ್ಕೋಡಿಯ ಹಿರೇಕೋಡಿಯ ನಂದಿ ಬೆಟ್ಟದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನೆರವೇರಿತು. ಈ ವೇಳೆ ಭಕ್ತ ಸಾಗರವೇ ಹರಿದು ಬಂದಿತ್ತು. ಹಲವು ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು.
ಹೆದ್ದಾರಿ ಬಂದ್ ಮಾಡಿ ಆಕ್ರೋಶ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ರವಿವಾರ ಬೆಳಗಾವಿಯ ಸುವರ್ಣವಿಧಾನಸೌಧ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಜೈನ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು.
ಜೈನ ಮುನಿಗಳಾದ ಶ್ರೀ ಬಾಲಾಚಾರ್ಯ ಸಿದ್ಧಸೇನ ಮಹಾರಾಜರ ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಮುಂದೆ ರಾಷ್ಟ್ರೀಯ ಹೆದ್ದಾರಿ ತಡೆದು ಜೈನ ಸಮಾಜದವರು ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಘೋಷಣೆ ಕೂಗಿ ಆಗ್ರಹಿಸಿದರು.
‘ಹತ್ಯೆ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ದಿಗಂಬರ ಮುನಿಗಳ ಈ ರೀತಿಯ ಹತ್ಯೆ ಇತಿಹಾಸದಲ್ಲಿಯೇ ಪ್ರಥಮ. ಕೃತ್ಯ ಎಸಗಿದವರ ಬಂಧನ ಆಗಿರುವ ಬಗ್ಗೆ ತಿಳಿದುಬಂದಿದೆ. ಇದಕ್ಕಾಗಿ ಸರಕಾರ ಮತ್ತು ಪೆÇಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಆದರೆ, ತಪ್ಪಿತಸ್ಥರಿಗೆ ತಕ್ಷ ಶಿಕ್ಷೆಯಾಗಬೇಕು. ಮಾತ್ರವಲ್ಲದೆ, ಇತರೆ ಮುನಿಗಳಿಗೆ ಸರಕಾರ ರಕ್ಷಣೆ ಕೊಡಬೇಕು’
-ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ
‘ಜೈನ ಮುನಿಗಳ ಹತ್ಯೆ ಖಂಡನೀಯ. ಇದನ್ನು ಸರಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರೂ ಪ್ರಚೋದನೆಗೆ ಒಳಗಾಗಬಾರದು, ಬೇರೆಯವರನ್ನು ಪ್ರಚೋದಿಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ರಾಜ್ಯ ಸರಕಾರವೂ ಸೂಕ್ತ ಕ್ರಮ ಕೈಗೊಳ್ಳಲಿದೆ’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ







