ಕಮಲ್ ಹಾಸನ್ ಕ್ಷಮೆಯಾಚಿಸುವಂತೆ ನಟ, ನಟಿಯರ ಆಗ್ರಹ

ಕಮಲ್ ಹಾಸನ್ | (PTI)
ಬೆಂಗಳೂರು : ಇತ್ತೀಚಿಗೆ ಕಮಲ್ ಹಾಸನ್ ಕಾರ್ಯಕ್ರಮವೊಂದರಲ್ಲಿ ʼಕನ್ನಡ ಹುಟ್ಟಿದ್ದು ತಮಿಳಿʼನಿಂದ ಎಂಬ ಹೇಳಿಕೆಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡದ ನಟ-ನಟಿಯರು ಕಮಲ್ ಹಾಸನ್ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸಾಧು ಕೋಕಿಲಾ, ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ. ಅವರ ಚಲನಚಿತ್ರಗಳು ತಮಿಳುನಾಡಿನಲ್ಲಿ ಯಶಸ್ವಿಯಾಗದಿದ್ದರೂ ಕರ್ನಾಟಕದಲ್ಲಿ ಯಶಸ್ವಿಯಾಗಿವೆ. ಕನ್ನಡಿಗರು ಅವರ ಕೈಬಿಟ್ಟಿಲ್ಲ. ಕಮಲ್ ಅವರನ್ನು ಕನ್ನಡದ ಜನ ಪ್ರೀತಿಸುತ್ತಾರೆ. ಈಗ ಅವರ ಮಾತಿನಿಂದ ಕನ್ನಡಿಗರಿಗೆ ಬೇಸರವಾಗಿದೆ. ಅವರು ಕ್ಷಮೆ ಕೇಳಲೇ ಬೇಕು, ಅವರಿಗೆ ಬೇರೆ ದಾರಿಯಿಲ್ಲ ಎಂದು ತಿಳಿಸಿದರು.
ಕನ್ನಡ, ಕರ್ನಾಟಕ ನಮ್ಮ ಭಾವನೆ, ಅದರ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಸುಮ್ಮನೆ ಕೂರಲಾಗದು, ನಾವು ವಿಶಾಲ ಹೃದಯದವರು. ಪ್ರತಿ ಭಾಷೆಯ ಸಿನೆಮಾ ನೋಡುತ್ತೇವೆ. ನಮ್ಮ ಭಾಷೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ನಾವು ಯಾಕೆ ಧ್ವನಿ ಎತ್ತಬಾರದು. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ. ಕನ್ನಡ ಸರಿಯಾಗಿ ಮಾತಾಡದವರಿಗೆ ಕನ್ನಡ ಕಲಿಸುತ್ತೇವೆ. ಭಾಷೆಯ ಬಗ್ಗೆ ತಪ್ಪಾಗಿ ಮಾತಾಡುವವರಿಗೆ ಏನು ಹೇಳುವುದು.
-ರಚಿತಾ ರಾಮ್, ನಟಿ
ಭಾಷಾ ವಿವಾದಗಳು ನಟರ ಮೇಲೆ ಬಾರೀ ಪರಿಣಾಮ ಬೀರುತ್ತದೆ. ನನ್ನ ಸಿನೆಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗುವಾಗ ನನ್ನನ್ನು ಕೆಣಕಬಹುದು. ಒಬ್ಬರ ವಿವೇಚನೆ ಇಲ್ಲದ ಮಾತು ಹಲವರ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಯೊಬ್ಬರೂ ಜಾಗರೂಕತೆಯಿಂದ ಮಾತಾಡಬೇಕು. ಬೆಳೆದ ಮೇಲೆ ಏನು ಮಾಡಿದರೂ ನಡೆಯುತ್ತದೆ ಎಂದಲ್ಲ. ಬೆಳೆದ ಮೇಲೆಯೇ ತಗ್ಗಿಬಗ್ಗಿ ನಡೆಯಬೇಕು.
-ವಶಿಷ್ಠ ಸಿಂಹ, ನಟ







