ಕ್ಷಮೆ ಕೇಳಲು ನಟ ಕಮಲ್ ಹಾಸನ್ಗೆ 24ಗಂಟೆಗಳ ಗಡುವು ನೀಡಿದ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’

ಕಮಲ್ ಹಾಸನ್ | PC : PTI
ಬೆಂಗಳೂರು : ‘ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ’ ಎಂಬ ಚಿತ್ರನಟ ಕಮಲ್ ಹಾಸನ್ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕಮಲ್ ಹಾಸನ್ ಕ್ಷಮೆ ಕೇಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ದಿನದ ಗಡುವು ನೀಡಿದೆ.
‘ನಾನು ಯಾವುದೇ ತಪ್ಪು ಮಾತನಾಡಿಲ್ಲ. ಹೀಗಾಗಿ ಕ್ಷಮೆ ಕೇಳುವುದಿಲ್ಲ’ ಎಂದು ಹಠಕ್ಕೆ ಬಿದ್ದಿರುವ ನಟ ಕಮಲ ಹಾಸನ್ ಸ್ಪಷ್ಟಣೆ ನೀಡಿದ್ದಾರೆ. ಆದರೆ, ಕ್ಷಮೆ ಕೇಳದ ಹೊರತು ‘ಅವರ ನಟನೆಯ ‘ಥಗ್ ಲೈಫ್’ ಚಿತ್ರದ ಬಿಡುಗಡೆಗೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ’ ಎಂದು ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.
ಈ ಬೆಳವಣಿಗೆಗಳ ನಡುವೆ ‘ಥಗ್ ಲೈಫ್’ ಚಿತ್ರದ ಕರ್ನಾಟಕದ ವಿತರಕ ವೆಂಕಟೇಶ್ ಕೋರಿಕೆ ಮೇರೆಗೆ ನಟ ಕಮಲ್ ಹಾಸನ್ಗೆ 24 ಗಂಟೆಗಳ ಗಡುವು ನೀಡಲಾಗಿದೆ. ಈ ಬಗ್ಗೆ ಕಮಲ ಹಾಸನ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಭೆಯ ಬಳಿಕ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಟ ಕಮಲ ಹಾಸನ್ ಕನ್ನಡದ ವಿಚಾರಕ್ಕೆ ಕ್ಷಮೆ ಕೇಳಿಲ್ಲ. ಈಗ ಅವರಿಗೆ ಮತ್ತೆ 24 ಗಂಟೆ ಸಮಯ ನೀಡಲಾಗಿದೆ. ‘ಕಮಲ್ ಹಾಸನ್ ಕ್ಷಮೆ ಕೇಳುವ ಸಾಧ್ಯತೆ ಇಲ್ಲ ಎಂದು ಅನಿಸುತ್ತಿದೆ. ಎಲ್ಲರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲರ ಅನಿಸಿಕೆ ಏನಿದೆ? ಎಂಬುದನ್ನು ನೋಡುತ್ತೇವೆ ಎಂದರು.
ನಟ ಕಮಲ್ ಹಾಸನ್ ಸದ್ಯ ದುಬೈನಲ್ಲಿದ್ದಾರೆ. ಮಂಗಳವಾರ (ಜೂ.3) ಬೆಳಗ್ಗೆ 11 ಗಂಟೆಗೆ ಚೆನ್ನೈಗೆ ಬರಲಿದ್ದಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆ ವರೆಗೆ ಕ್ಷಮೆ ಕೋರಲು ಸಯಮ ನೀಡಬೇಕೆಂದು ವಿತರಕರು ಕೇಳಿದ್ದಾರೆ. ಹೀಗಾಗಿ ಅವರಿಗೆ ಕಾಲಾವಕಾಶ ನೀಡಲಾಗಿದೆ ಎಂದು ನರಸಿಂಹಲು ಹೇಳಿದರು.
ನಟ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಪ್ರಚಾರದ ವೇಳೆ ‘ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ಈ ವಿಚಾರ ಗಂಭೀರವಾಗಿರಲ್ಲಿ. ಆ ಬಳಿಕ ಆ ವಿಡಿಯೋ ವೈರಲ್ ಆಗಿ ಇದರ ಬಗ್ಗೆ ಚರ್ಚೆಯಾಗಿದ್ದು, ಕಮಲ್ ಕ್ಷಮೆ ಕೇಳುವಂತೆ ಒತ್ತಾಯ ಮಾಡಲಾಗಿದೆ. ಆದರೆ, ಕಮಲ್ ಹಾಸನ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.







