ನಟ ಕಮಲ್ಹಾಸನ್ ಕನ್ನಡಿಗರಿಗೆ ಕ್ಷಮೆ ಕೇಳದಿದ್ದರೆ ಹೋರಾಟ : ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್
ಬೆಂಗಳೂರು : ‘ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರಿಗೆ ಅಪಮಾನ ಮಾಡಿರುವ ನಟ ಕಮಲ್ ಹಾಸನ್ ಈ ಕೂಡಲೇ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕನ್ನಡಪರ ಸಂಘಟನೆಗಳೆಲ್ಲ ಒಗ್ಗೂಡಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಲ್ ಹಾಸನ್ ಕನ್ನಡದ ಮುಂದೆ ಬಹಳ ಚಿಕ್ಕ ವ್ಯಕ್ತಿ. ಭಾಷೆಗಳ ಬಗ್ಗೆ ಅರಿವಿಲ್ಲದ ಅವರು ಅನಗತ್ಯವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿನಿಮಾ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳುನಿಂದ ಕನ್ನಡ ಬಂದಿದೆ ಎಂದು ಮಾತನಾಡುವ ಅವಶ್ಯಕತೆಯೇ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರ ಹೇಳಿಕೆ ಅಕ್ಷ್ಯಮ್ಮ ಅಪರಾದ ಮತ್ತು ಕನ್ನಡ ನಾಡಿಗೆ ಮಾಡಿದ ಮಹಾದ್ರೋಹ. ರಾಜ್ಯದಲ್ಲಿನ ಕೆಲವರು ತೆರೆಮರೆಯಲ್ಲಿ ಗೊತ್ತಿಲ್ಲದೇ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಮಲ್ ಹಾಸನ್ ಕನ್ನಡಿಗರಿಗೆ ಕ್ಷಮೆಯಾಚಿಸದೇ ರಾಜ್ಯಕ್ಕೆ ಬರಬಾರದು ಮತ್ತು ಅವರ ಚಿತ್ರಗಳು ಬಿಡುಗಡೆಯಾಗಬಾರದು. ಅನಿವಾರ್ಯವಾಗಿ ಎಲ್ಲ ಕನ್ನಡಪರ ಸಂಘಟನೆಗಳು ಸಭೆ ಸೇರಿ ಕರ್ನಾಟಕ ಬಂದ್ಗೂ ಕರೆ ಕೊಡುತ್ತೇವೆ. ಅವರ ಈ ಹೇಳಿಕೆಯನ್ನು ಸುಮ್ಮನೆ ಬಿಡುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ, ಕ್ಷಮಾಪಣೆ ಕೇಳಿ ತನ್ನ ತನವನ್ನು ಉಳಿಸಿಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದರು.







