ಕನ್ನಡ ನಾಮಫಲಕ ಅಳವಡಿಕೆಗೆ ನಿಗಾವಹಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಚಿವ ಶಿವರಾಜ್ ತಂಗಡಗಿ

ಸಚಿವ ಶಿವರಾಜ್ ತಂಗಡಗಿ
ಬೆಳಗಾವಿ(ಸುವರ್ಣವಿಧಾನಸೌಧ): ರಾಜ್ಯದಲ್ಲಿ ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆ ಕುರಿತು ನಿಗಾವಹಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಶುಕ್ರವಾರ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಡಾ. ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಅವರು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022ರ ಮೂಲ ಕಾಯ್ದೆ 17ನೇ ಪ್ರಕರಣದ ಆರನೇ ಉಪ-ಪ್ರಕರಣದಂತೆ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ಗಳು ಮುಂತಾದವುಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರದರ್ಶಿಸಬೇಕು. ಈ ಕಾಯ್ದೆಯ ಅನುಷ್ಠಾನ ಜವಾಬ್ದಾರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳದ್ದಾಗಿದೆ ಎಂದರು.
ಇದು ನಿರಂತರ ಪ್ರಕ್ರಿಯೆಯಾಗಿರುವ ಕಾರಣ ಅಪೂರ್ಣಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಕಾಯ್ದೆಯ ಅಧಿನಿಯಮದಂತೆ ಕ್ರಮವಹಿಸಲು ಅನುಷ್ಠಾನ ಅಧಿಕಾರಿಗಳಾದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳದ ಸಂಘ-ಸಂಸ್ಥೆಗಳ ವಿರುದ್ಧ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ನಿಯಮ 23ರ ಅನುಸಾರ ಮೊದಲನೆಯ ಅಪರಾಧಕ್ಕಾಗಿ 5 ಸಾವಿರ ರೂ., ಎರಡನೇ ಅಪರಾಧಕ್ಕಾಗಿ 10 ಸಾವಿರ ರೂ. ಮತ್ತು ನಂತರದ ಪ್ರತಿ ಅಪರಾಧಕ್ಕಾಗಿ 20 ಸಾವಿರ ರೂ.ವರೆಗೆ ದಂಡ ಮತ್ತು ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ತಿಂಗಳೊಳಗೆ ಕಡ್ಡಾಯ ಅನುಷ್ಠಾನ:
ಸರಕಾರ ಜಾರಿಗೊಳಿಸಿರುವ ಶೇ.60ರಷ್ಟು ಕನ್ನಡ ಭಾಷೆಯಿರುವ ನಾಮಫಲಕವನ್ನು ಒಂದು ತಿಂಗಳೊಳಗೆ ಕಡ್ಡಾಯವಾಗಿ ಅನು ನ ಗೊಳಿಸಲಾಗುವುದು. ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಸಂಬಂಧ ನಿಗಾ ವಹಿಸಿ ಕ್ರಮ ಕೈಗೊಳ್ಳಲು ಕಾರ್ಯಾಪಡೆಯನ್ನು ರಾಜ್ಯದ ಬೆಂಗಳೂರಿನ 8 ವಲಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ರಚಿಸಲಾಗಿದೆ.







