‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ’ಗೆ ಸಲಹಾ ಸಮಿತಿ ರಚನೆ; ಸಚಿವ ತಂಗಡಗಿ ಅಧ್ಯಕ್ಷತೆಯಲ್ಲಿ 64 ಮಂದಿಯ ನೇಮಕ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.10: ರಾಜ್ಯ ಸರಕಾರವು 2025ನೆ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ರಚನೆ ಮಾಡಿದ್ದು, 64 ಮಂದಿ ಇರುವ ಈ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಅಧ್ಯಕ್ಷರಾಗಿದ್ದಾರೆ.
ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್, ಲೇಖಕ ಬಾಲಸುಬ್ರಮಣ್ಯ ಕಂಜರ್ಪಣೆ, ಸಾಹಿತಿಗಳಾದ ಸಬಿಹಾ ಭೂಮಿಗೌಡ, ಸುಬ್ಬು ಹೊಲೆಯಾರ್, ದು.ಸರಸ್ವತಿ, ಪ್ರೊ.ಜಿ.ಅಬ್ದುಲ್ ಬಶೀರ್, ಚಿತ್ರನಟ ರವಿಚಂದ್ರನ್, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ಸಮಾಜ ಸೇವಕರಾದ ರವೀಶ್, ಕೆ.ಪಿ.ಸುರೇಶ್ ಸೇರಿದಂತೆ 46 ಮಂದಿ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ವಿವಿಧ ಅಕಾಡೆಮಿಯ 16 ಮಂದಿ ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಸಮಾಜ ಸೇವೆ ಕ್ಷೇತ್ರದಿಂದ ಮಾರುತಿ ಬೌದ್ದೆ, ಕೆ.ಪಿ.ಸುರೇಶ್, ಇ.ಟಿ. ರತ್ನಕರ್ ತಳವಾರ, ರವೀಶ್, ದು. ಸರಸ್ವತಿ, ಫಾದರ್ ಟಿಯೋಲ ಸಮಿತಿಯ ಸದಸ್ಯರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಿಂದ ಡಾ.ಮಾಲತಿ ಪಟ್ಟಣಶೆಟ್ಟಿ, ಪ್ರೊ.ಜಿ.ಅಬ್ದುಲ್ ಬಶೀರ್, ಚಂದ್ರಶೇಖರ ನಂಗ್ಲಿ, ಡಾ. ಎಂ.ಕೆ. ಮಾಸ್ಕೇರಿ ನಾಯಕ್, ಎಚ್.ಕೆ. ಸುಬ್ಬು ಹೊಲೆಯಾರ್, ಡಿ.ಬಿ. ರಜಿಯಾ, ಸಬಿಹಾ ಭೂಮಿಗೌಡ ಸದಸ್ಯರಾಗಿದ್ದಾರೆ.
ಕೃಷಿ ಕ್ಷೇತ್ರದಿಂದ ಸುನಂದ ಜಯರಾಂ, ನಾಗರತ್ನ ಪಾಟೀಲ್, ಎಚ್.ಕೆ.ಶ್ರೀಕಂಠು ಸದಸ್ಯರಾಗಿದ್ದರೆ, ಜಾನಪದ ಕ್ಷೇತ್ರದಿಂದ ಸಿದ್ದಣ್ಣ ಜಕ್ಕಬಾಳ, ಪ್ರೊ.ಶಿವರಾಂಶೆಟ್ಟಿ, ಡಾ.ಅಪ್ಪಗೆರೆ ತಿಮ್ಮರಾಜು ಸದಸ್ಯರಾಗಿದ್ದಾರೆ. ರಂಗಭೂಮಿ ಕ್ಷೇತ್ರದಿಂದ ಶ್ರೀನಿವಾಸ ಜಿ.ಕಪ್ಪಣ್ಣ, ಪ್ರೇಮಾ ಬಾದಾಮಿ ಮತ್ತು ಮಾಧ್ಯಮ ಕ್ಷೇತ್ರದಿಂದ ಅನಿಲ್ ಹೊಸಮನಿ, ಗಿರೀಶ್ ಬಾಬು ಸದಸ್ಯರಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಿಂದ ಡಾ. ಸಂಜೀವ್ ಕುಲಕರ್ಣಿ, ಡಾ. ಸಿ.ಆರ್. ಚಂದ್ರಶೇಖರ್, ಡಾ. ಎಸ್. ಪುಷ್ಪರಾಜ್, ಸಂಗೀತ ಕ್ಷೇತ್ರದಿಂದ ಡಾ.ಎಂ.ವೆಂಕಟೇಶ ಕುಮಾರ್, ಅಂಬಯ್ಯ ನುಲಿ ಸದಸ್ಯರಾಗಿದ್ದಾರೆ. ನೃತ್ಯ ಕ್ಷೇತ್ರದಿಂದ ಗೀತಾ ದಾತರ್, ಡಾ. ತುಳಸಿ ರಾಮಚಂದ್ರ ಮತ್ತು ಶಿಕ್ಷಣ ಕ್ಷೇತ್ರದಿಂದ ವೆಂಕಟೇಶ ಮಾಚಕನೂರು, ಎಚ್.ಎಂ. ಭೂತನಾಳ್, ಡಾ. ಡಿ.ಜಿ. ಗವಾನಿ, ಪರಿಸರ ಕ್ಷೇತ್ರದಿಂದ ಅ.ನ.ಯಲ್ಲಪ್ಪರೆಡ್ಡಿ, ಸದಸ್ಯರಾಗಿದ್ದಾರೆ.
ಆಡಳಿತ ಕ್ಷೇತ್ರದಿಂದ ಎನ್.ಆರ್.ವಿಶುಕುಮಾರ್, ಡಾ.ಡೊಮಿನಿಕ್, ಚಿತ್ರಕಲೆ ಕ್ಷೇತ್ರದಿಂದ ಗುಜ್ಜಾರಪ್ಪ, ನ್ಯಾಯಾಂಗ ಕ್ಷೇತ್ರದಿಂದ ಪ್ರೊ.ರವಿವರ್ಮ ಕುಮಾರ್, ಬಾಲಸುಬ್ರಹ್ಮಣ್ಯ ಕಂಜರ್ಪಣೆ ಸದಸ್ಯರಾಗಿದ್ದಾರೆ. ಚಲನಚಿತ್ರ ಕ್ಷೇತ್ರದಿಂದ ಗಿರಿಜಾ ಲೋಕೇಶ್, ವಿ.ರವಿಚಂದ್ರನ್, ಕ್ರೀಡಾಕ್ಷೇತ್ರದಿಂದ ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಉಮಾದೇವಿ ಆರ್., ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಡಾ. ಎಸ್.ಎಂ. ಶಿವಪ್ರಸಾದ್, ಪ್ರೊ.ಬಿ.ಕುಮಾರಸ್ವಾಮಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿದ್ದಾರೆ.
ಕ್ರೀಡಾ ಇಲಾಖೆಯ ಆಯುಕ್ತರು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರು ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದಾರೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಬರುವ ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು, ಚಲನಚಿತ್ರ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿಯ ಅಧ್ಯಕ್ಷರು, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರು ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದಾರೆ.







