‘ಕಸಾಪ’ಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಪಟ್ಟು : ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಸಮಿತಿ ನಿರ್ಣಯ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಅಮಾನತು ಮಾಡುವುದರ ಜತೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ರಾಜ್ಯ ಸರಕಾರ ಮುಂದಾಗಬೇಕು ಎಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ‘ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಸಮಿತಿ’ ಮಂಡಿಸಿದೆ.
ರವಿವಾರ ನಗರದ ಪುರಭವನದಲ್ಲಿ ಕನ್ನಡ ನಾಡು ನುಡಿ ಜಾಗೃತಿ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಸಮಿತಿ ಹಮ್ಮಿಕೊಂಡಿದ್ದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ದುರಾಡಳಿತ ಮತ್ತು ಸರ್ವಾಧಿಕಾರವನ್ನು ಖಂಡಿಸಿ ಜಾಗೃತಿ ಸಮಾವೇಶದಲ್ಲಿ ಕಸಾಪ ಅಧ್ಯಕ್ಷರ ವಿರುದ್ಧ ತನಿಖೆ ಮುಗಿಯುವ ವರೆಗೆ ವಾರ್ಷಿಕ ಸಭೆ ನಡೆಸದಂತೆ ನಿರ್ಬಂಧ ಹೇರಬೇಕು. ಸಹಕಾರ ಇಲಾಖೆ ಆರಂಭಿಸಿರುವ ತನಿಖೆಯನ್ನು ತ್ವರಿತಗೊಳಿಸಬೇಕು. ಕಸಾಪ ದಾಖಲೆಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಆರೋಪಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಬಳಿಕ, ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಂಪ ನಾಗರಾಜಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಜಯಪ್ರಕಾಶ್ ಗೌಡ, ಮೀರಾ ಶಿವಲಿಂಗಯ್ಯ, ಡಾ.ವಸುಂಧರಾ ಭೂಪತಿ, ದಲಿತ ಮುಖಂಡ ಮಾವಳ್ಳಿ ಶಂಕರ್, ವಿಚಾರವಾದಿ ಕೆ.ಎಸ್.ವಿಮಲಾ, ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಕನ್ನಡ ಪರ ಸಂಘಟನೆಯ ಹೋರಾಟಗಾರರಾದ ಸಾ.ರಾ.ಗೋವಿಂದು, ಜಯಪ್ರಕಾಶ್ ಗೌಡ, ಶಿವರಾಮೇಗೌಡ, ಸಿ.ಕೆ.ರಾಮೇಗೌಡ ಸೇರಿದಂತೆ ಸಮಿತಿಯ ಎಲ್ಲ ಸಂಚಾಲಕರು ಸರಕಾರಕ್ಕೆ ಕಳುಹಿಸುವ ನಿರ್ಣಯಕ್ಕೆ ಸಹಿ ಹಾಕಿದರು.
ಇದಕ್ಕೂ ಮೊದಲು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಕಸಾಪ ಅಧ್ಯಕ್ಷ ಮಹೇಶ್ ಜೋಶಿಯ ವರ್ತನೆಯ ಹಿಂದೆ ರಾಜಕೀಯ ಷಡ್ಯಂತ್ರ ಹಾಗೂ ಜನವಿರೋಧಿ ಆರೆಸ್ಸೆಸ್ ಕೈವಾಡ ಇದೆ ಎಂದು ಆಪಾದಿಸಿದರು.
2000ನೆ ಇಸವಿಯ ನಂತರ ಸಾಹಿತ್ಯ ಪರಿಷತ್ತು ಸಾಹಿತಿಗಳ, ಸೂಕ್ಷ್ಮ ಸಂವೇದನೆಯುಳ್ಳವರ ಕೈಯಲ್ಲಿ ಉಳಿದಿಲ್ಲ. ಬಂಡವಾಳಶಾಹಿಗಳ ಕೈಗೆ ಹೋಗಿದೆ. ಇಂತಹ ಸಂದರ್ಭದಲ್ಲಿಯೇ ಪ್ರತಿ ಜಿಲ್ಲೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಹಣ ಹಂಚಿ ಜೋಷಿಯನ್ನು ಗೆಲ್ಲಿಸಿದ್ದಾರೆ ಎಂದು ಆರೋಪಿಸಿದರು.
ರೈತ ನಾಯಕಿ ಸುನಂದಾ ಮಾತನಾಡಿ, ಅಸಂಬದ್ಧವಾಗಿ, ಕಾನೂನು ಬಾಹಿರವಾಗಿ ಕಸಾಪದಲ್ಲಿ ಆಗುವ ಬೈಲಾ ತಿದ್ದುಪಡಿ ನಿಲ್ಲಿಸಬೇಕು. ಪರಿಷತ್ತಿನ ಸರ್ವ ಸದಸ್ಯರು ಬೈಲಾ ತಿದ್ದುಪಡಿ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಮಾದರಿ ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗಾಗಿ ಕಸಾಪ ಸಿದ್ಧಾಂತ ಉಳಿಸಲು ಎಲ್ಲರು ಕಂಕಣ ಬದ್ಧರಾಗಬೇಕು ಎಂದ ಅವರು, ಪರಿಷತ್ತಿನ ಆಶಯ ಉಳಿಸಬೇಕೆಂದು ನಿಂತಾಗ ಯಾವ ನೋಟಿಸ್‍ಗಳಿಗೂ ನಾವು ಹೆದರಲ್ಲ ಎಂದರು.
ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕಸಾಪ ಅಧ್ಯಕ್ಷರ ದುರಾಡಳಿತ, ಆರ್ಥಿಕ ಅಶಿಸ್ತು ಹಾಗೂ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿಗಳು 6 ಜನ ಉನ್ನತಾಧಿಕಾರಿಗಳ ತನಿಖಾ ತಂಡವನ್ನು ನೇಮಕ ಮಾಡಿ ಆದೇಶಿಸಿದೆ. ಆದರೆ ಈ ತನಿಖಾ ತಂಡಕ್ಕೆ ಮಾರ್ಗದರ್ಶನ ಮಾಡಲು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖ ನಿರ್ಣಯಗಳೇನು?
* ಕಸಾಪ ಅಧ್ಯಕ್ಷರ ತನಿಖೆ ಮುಕ್ತಾಯದ ವರೆಗೂ ವಾರ್ಷಿಕ ಸಭೆ ನಡೆಸದಂತೆ ನಿರ್ಬಂಧ ಹೇರಬೇಕು.
* ತಕ್ಷಣವೇ ಕಸಾಪ ದಾಖಲೆಗಳನ್ನು ವಶಕ್ಕೆ ಪಡೆಯಬೇಕು.
* ಕಸಾಪ ಅಧ್ಯಕ್ಷರ ಮೇಲಿನ ಆರೋಪಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು.
* ಸಹಕಾರ ಇಲಾಖೆಯಿಂದ ಆರಂಭವಾಗಿರುವ ತನಿಖೆಯನ್ನು ತ್ವರಿತಗೊಳಿಸಬೇಕು.







