ಅಮೀರೆ ಶರೀಅತ್ ಅಗಲಿಕೆ ಕುರಿತು ಕರವೇ ನಾರಾಯಣಗೌಡರ ಭಾವನಾತ್ಮಕ ಪತ್ರ

ಬೆಂಗಳೂರು: ಅಮೀರೆ ಶರೀಅತ್ ಕರ್ನಾಟಕ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ಅಗಲಿಕೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?:
‘ಈ ಸಾಲುಗಳನ್ನು ಬರೆಯುವಾಗ ಮನಸ್ಸು ತುಂಬಾ ಭಾರವಾಗಿದೆ. ಇಂದು ನಮ್ಮ ನಡುವೆ ಇಲ್ಲದ ಹಝ್ರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ನಿಧನದ ಸುದ್ದಿ ನನಗೆ ಆಳವಾದ ನೋವನ್ನು ತಂದಿದೆ. ಇದು ಕೇವಲ ಒಬ್ಬ ಧರ್ಮಗುರುವಿನ ಅಗಲಿಕೆ ಅಲ್ಲ. ಸಮಾಜದೊಳಗಿನ ಅಂತರಗಳನ್ನು ಸಂವಾದದಿಂದ ಕಡಿಮೆ ಮಾಡಬಹುದೆಂದು ನಂಬಿದ್ದ, ಅದನ್ನು ಬದುಕಿನಲ್ಲಿ ಅನುಸರಿಸಿದ್ದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡ ದುಃಖ ಇದು’ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.
‘ಅವರನ್ನು ನಾನು ಭೇಟಿಯಾದ ದಿನಗಳು ಈಗ ನೆನಪಾಗಿ ಕಾಡುತ್ತಿವೆ. ಆ ಭೇಟಿಗಳು ಯಾವುದೇ ಔಪಚಾರಿಕತೆಯ ಭಾಗವಾಗಿರಲಿಲ್ಲ. ಕರ್ನಾಟಕದ ಬಗ್ಗೆ, ಇಲ್ಲಿ ನೆಲೆಸಿರುವ ಸಮುದಾಯಗಳ ಸಹಬಾಳ್ವೆಯ ಬಗ್ಗೆ, ವಿಶೇಷವಾಗಿ ಮುಸ್ಲಿಮ್ ಸಮುದಾಯ ಕನ್ನಡದ ನೆಲದೊಂದಿಗೆ ಇನ್ನಷ್ಟು ಬೇರೂರಬೇಕು ಎಂಬ ಕಾಳಜಿಯೆ ನಮ್ಮ ಮಾತುಕತೆಯ ಕೇಂದ್ರವಾಗಿತ್ತು. ಭಾಷೆ ಎನ್ನುವುದು ಒತ್ತಾಯದಿಂದ ಕಲಿಸಬೇಕಾದ ವಿಷಯವಲ್ಲ, ಅದು ಬದುಕಿನ ಭಾಗವಾಗಬೇಕು ಎಂಬ ಸ್ಪಷ್ಟತೆ ಅವರ ಮಾತುಗಳಲ್ಲಿ ಕಾಣುತ್ತಿತ್ತು’ ಎಂದು ಅವರು ಸ್ಮರಿಸಿದ್ದಾರೆ.
‘ಕರ್ನಾಟಕದಲ್ಲಿ ಕನ್ನಡವೆ ಆಡಳಿತದ ಭಾಷೆ, ನೆಲದ ಭಾಷೆ ಎಂದು ಅವರು ಹೇಳಿದಾಗ ಅದರಲ್ಲಿ ಒತ್ತಡ ಇರಲಿಲ್ಲ, ಹಠ ಇರಲಿಲ್ಲ. ಅದು ಈ ಮಣ್ಣಿನ ಸತ್ಯವನ್ನು ಒಪ್ಪಿಕೊಂಡ ಧ್ವನಿ. ಧರ್ಮವನ್ನು ಉಳಿಸಿಕೊಂಡೆ ಸಮಾಜದ ಜೊತೆ ಬದುಕಬೇಕು, ಸಮಾಜದಿಂದ ದೂರವಾದ ಧರ್ಮ ಸಮುದಾಯವನ್ನು ಬಲಿಷ್ಠಗೊಳಿಸಲಾರದು ಎಂಬ ಸಮತೋಲನದ ಚಿಂತನೆ ಅವರಿಗೆ ಸಹಜವಾಗಿತ್ತು’ ಎಂದು ಅಮೀರೆ ಶರೀಅತ್ ಕುರಿತು ಅವರು ನುಡಿದಿದ್ದಾರೆ.
‘ಯುವಕರು ಶಿಕ್ಷಣದತ್ತ ಸಾಗಬೇಕು, ಆಡಳಿತ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳಬೇಕು, ನಾಡಿನ ಸೇವೆಯಲ್ಲಿ ತೊಡಗಬೇಕು ಎಂಬ ಅವರ ಕಾಳಜಿ ಕೇವಲ ಸಮುದಾಯದೊಳಗೆ ಸೀಮಿತವಾಗಿರಲಿಲ್ಲ, ಅದು ಕರ್ನಾಟಕದ ಭವಿಷ್ಯಕ್ಕೆ ಸಂಬಂಧಪಟ್ಟ ಚಿಂತನೆಯಾಗಿತ್ತು. ಇಂದು ಅವರ ಅಗಲಿಕೆಯಿಂದ ನನ್ನೊಳಗೆ ಒಂದು ನಂಬಿಕೆಯ ಜಾಗ ಖಾಲಿಯಾಗಿದೆ. ಮಾತನಾಡಿ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು, ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ಗೌರವ ಉಳಿಸಬಹುದು ಎಂಬ ನಂಬಿಕೆಗೆ ಅವರು ಜೀವಂತ ಉದಾಹರಣೆಯಾಗಿದ್ದರು. ಆ ಧ್ವನಿ ಇಂದು ಮೌನವಾಗಿಬಿಟ್ಟಿದೆ ಅನ್ನೋದೇ ಮನಸ್ಸನ್ನು ಇನ್ನಷ್ಟು ನೋಯಿಸುತ್ತದೆ’ ಎಂದು ನಾರಾಯಣ ಗೌಡ ಕಂಬನಿ ಮಿಡಿದಿದ್ದಾರೆ.
‘ಅವರ ಜೊತೆ ನಡೆದ ಸಂಭಾಷಣೆಗಳಲ್ಲಿ ನಾನು ಕಂಡದ್ದು ದ್ವೇಷವಲ್ಲ, ಅಸಹನೆ ಅಲ್ಲ. ಅಲ್ಲಿ ಇತ್ತು ಸಮಾಜದ ಬಗ್ಗೆ ಇರುವ ಆತಂಕ, ಮುಂದಿನ ತಲೆಮಾರಿನ ಬಗ್ಗೆ ಇರುವ ಕಾಳಜಿ ಮತ್ತು ಕರ್ನಾಟಕದ ನೆಲದ ಮೇಲೆ ಇರುವ ಆಳವಾದ ಪ್ರೀತಿ. ಇಂತಹ ವ್ಯಕ್ತಿಗಳು ಹೆಚ್ಚು ಕಾಲ ಬದುಕಬೇಕು, ಹೆಚ್ಚು ಮಾತನಾಡಬೇಕು ಅನ್ನಿಸುವ ಹೊತ್ತಲ್ಲೆ ಅವರು ನಮ್ಮನ್ನು ಬಿಟ್ಟುಹೋಗಿರುವುದು ತುಂಬಲಾರದ ಖಾಲಿತನವನ್ನು ಬಿಟ್ಟಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ನಾನು ಇಂದು ವೈಯಕ್ತಿಕವಾಗಿಯೂ, ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿಯೂ ಒಂದು ಅಮೂಲ್ಯ ಕೊಂಡಿಯನ್ನು ಕಳೆದುಕೊಂಡಿದ್ದೇನೆ ಅನ್ನಿಸುವ ಭಾವನೆ ಕಾಡುತ್ತಿದೆ. ದೂರ ನಿಂತು ದೂಷಿಸುವ ಕಾಲದಲ್ಲಿ ಹತ್ತಿರ ಬಂದು ಮಾತನಾಡಿದ ವ್ಯಕ್ತಿಯನ್ನು ಕಳೆದುಕೊಳ್ಳುವುದು ಸಣ್ಣ ನಷ್ಟವಲ್ಲ. ಇದು ಸಹಬಾಳ್ವೆಯ ದಾರಿಯಲ್ಲಿ ಸಾಗುತ್ತಿದ್ದ ಒಂದು ಹೆಜ್ಜೆ ಅಚಾನಕ್ ನಿಂತಂತಾಗಿದೆ’ ಎಂದು ನಾರಾಯಣ ಗೌಡ ದುಃಖ ವ್ಯಕ್ತಪಡಿಸಿದ್ದಾರೆ.
‘ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾರವಾದ ಮನಸ್ಸಿನಿಂದ ಪ್ರಾರ್ಥಿಸುತ್ತೇನೆ. ಅವರು ಬಿಟ್ಟುಹೋದ ಮಾತುಗಳು, ಅವರು ತೋರಿಸಿದ ಸಂವಾದದ ದಾರಿ ಮರೆಯಾಗಬಾರದು. ಅವರು ಇಲ್ಲ… ಆದರೆ ಅವರು ನಂಬಿದ್ದ ಸಹಬಾಳ್ವೆಯ ಚಿಂತನೆ ಜೀವಂತವಾಗಿರಬೇಕು. ಅದೇ ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ’ ಎಂದು ಸಮಸ್ತ ಕರವೇ ಕಟುಂಬದ ಪರವಾಗಿ ನಾರಾಯಣ ಗೌಡ ಪ್ರಾರ್ಥಿಸಿದ್ದಾರೆ.







