ಕಾರ್ಪೊರೇಟ್ ಲಾಬಿಗೆ ಮಣಿಯದೆ ʼಉದ್ಯೋಗ ಮೀಸಲಾತಿ ವಿಧೇಯಕʼ ಜಾರಿ ಮಾಡಿ : ಕರವೇ ನಾರಾಯಣಗೌಡ

ಬೆಂಗಳೂರು : ಕಾರ್ಪೊರೇಟ್ ಲಾಬಿಗೆ ಮಣಿಯದೆ, ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50ರಷ್ಟು ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75ರಷ್ಟು ಮೀಸಲಾತಿ ವಿಧೇಯಕ ಜಾರಿ ಮಾಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರಿಗೆ ಮೀಸಲಾತಿ ವಿಧೇಯಕವನ್ನು ಸೋಮವಾರ ಸಂಪುಟ ಸಭೆ ಅನುಮೋದನೆ ನೀಡಿತ್ತು. ಇದೀಗ ಕಾರ್ಪೋರೇಟ್ ಲಾಬಿಯ ಒತ್ತಡಕ್ಕೆ ಮಣಿದು ವಿಧೇಯಕವನ್ನು ತಡೆಹಿಡಿಯುವ ನಿರ್ಧಾರ ಮಾಡಿದೆ. ಈ ನಿರ್ಧಾರ ಕನ್ನಡಿಗರ ಪಾಲಿಗೆ ಅತ್ಯಂತ ಕರಾಳ ಮತ್ತು ಆತ್ಮಘಾತುಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನುಮೋದನೆ ಪಡೆದಿದ್ದ ವಿಧೇಯಕವನ್ನು ತಡೆಹಿಡಿಯಲು ಕರ್ನಾಟಕದಲ್ಲಿ ನೆಲೆನಿಂತಿರುವ ಕಾರ್ಪೊರೇಟ್ ಶಕ್ತಿಗಳೇ ಕಾರಣ. ಸರಕಾರ ವಿಧೇಯಕ ತರುತ್ತಿರುವುದು ಗೊತ್ತಾಗುತ್ತಿದ್ದಂತೆ ಹಲವಾರು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರವನ್ನು ಆಯ್ಕೆ ಮಾಡಿರುವುದು ಕೋಟ್ಯಂತರ ಸಂಖ್ಯೆಯ ಸಾಮಾನ್ಯ ಜನರೆ ಹೊರತು, ಉದ್ಯಮಿಗಳಲ್ಲ. ಸರಕಾರ ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಿತ್ತೆ ಹೊರತು, ಸರಕಾರವನ್ನು ಬೆದರಿಸುವ ಕುತಂತ್ರ ಮಾಡುತ್ತಿರುವ ಉದ್ಯಮಿಗಳ ಪರವಾಗಿ ಅಲ್ಲ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉದ್ಯಮ ನಡೆಸುತ್ತಿರುವ ಹಲವಾರು ಉದ್ಯಮಗಳಲ್ಲಿ, ಉದ್ದೇಶಪೂರ್ವಕವಾಗಿ ಕನ್ನಡರಿಗೆ ಉದ್ಯೋಗ ನೀಡುತ್ತಿಲ್ಲ. ಇತರ ರಾಜ್ಯಗಳಿಂದ(ವಿಶೇಷವಾಗಿ ಉತ್ತರ ಭಾರತದಿಂದ)ಅಭ್ಯರ್ಥಿಗಳನ್ನು ಕರೆತಂದು ತುಂಬಲಾಗುತ್ತಿದೆ. ಇದರಿಂದಾಗಿ ಬೆಂಗಳೂರು ಮತ್ತು ಪ್ರಮುಖ ನಗರಗಳು ವಲಸಿಗರಿಂದ ತುಂಬಿ ತುಳುಕುವಂತಾಗಿದ್ದು ಮೂಲನಿವಾಸಿಗಳ ಪಾಡು ಹೇಳತೀರದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಧೇಯಕವನ್ನು ವಿರೋಧಿಸುವ ನೆಪದಲ್ಲಿ ಕೆಲ ಉದ್ಯಮಿಗಳು ಕನ್ನಡಿಗರಿಗೆ ಕೌಶಲ್ಯ ಇಲ್ಲ, ಅರ್ಹತೆ ಇಲ್ಲ, ಕರ್ನಾಟಕ ಭ್ರಷ್ಟ ರಾಜ್ಯ ಎಂದೆಲ್ಲ ಹೇಳಿಕೆ ನೀಡಿದ್ದಾರೆ. ಇಂಥವರು ತಮ್ಮ ನಾಲಿಗೆ ಬಿಗಿಹಿಡಿದು ಮಾತಾಡುವುದು ಒಳ್ಳೆಯದು. ಕನ್ನಡಿಗರನ್ನು ಹೀಗೆ ಪ್ರಚೋದಿಸಿದರೆ ಏನಾಗುತ್ತದೆ ಎಂಬ ಇತಿಹಾಸ ಮರೆಯಬಾರದು. ಕನ್ನಡಿಗರನ್ನು ನಿಂದಿಸುವವರಿಗೆ ಕರ್ನಾಟಕದಲ್ಲಿ ಇರುವ ಯೋಗ್ಯತೆಯೂ ಇಲ್ಲ, ಅರ್ಹತೆಯೂ ಇಲ್ಲ. ಅಂತಹವರು ಕರ್ನಾಟಕ ಬಿಟ್ಟು ತೊಲಗಲಿ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಯಾವ ಬಂಡವಾಳಶಾಹಿ ಶಕ್ತಿಗಳಿಗೂ ಅಂಜದೆ, ವಿಧೇಯಕವನ್ನು 15ದಿನದೊಳಗೆ ಅನುಮೋದನೆ ಮಾಡಿ ಕಾಯ್ದೆ ಮಾಡಬೇಕು. ಮುಂದಿನ ಸಂಪುಟ ಸಭೆಯಲ್ಲೆ ಈ ವಿಧೇಯಕ ಕುರಿತು ಚರ್ಚೆ ನಡೆಸಿ ನಂತರ ಜಾರಿಗೆ ತರುವುದಾಗಿ ಹೇಳಿದ್ದಾರೆ. ಹೀಗಾಗಿ ಮುಂದಿನ ಸಂಪುಟ ಸಭೆಯವರೆಗೆ ನಾವು ಕಾಯುತ್ತೇವೆ. ಕಾಯ್ದೆ ಮತ್ತೆ ನೆನೆಗುದಿಗೆ ಬಿದ್ದರೆ ರಾಜ್ಯ ಸರಕಾರ ಮತ್ತು ಕಾಯ್ದೆಗೆ ಅಡ್ಡಿಯಾಗಿರುವ ದುಷ್ಟಶಕ್ತಿಗಳ ವಿರುದ್ಧ ವೇದಿಕೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸುತ್ತದೆ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು.







