‘ಕೆಎಎಸ್’ ಮರು ಪರೀಕ್ಷೆ ನಡೆಸಿ : ಕರವೇ ನಾರಾಯಣಗೌಡ ಆಗ್ರಹ

ಟಿ.ಎ.ನಾರಾಯಣಗೌಡ
ಬೆಂಗಳೂರು : ಆ.27ರಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದ್ದು, ಪರೀಕ್ಷೆಗಳನ್ನು ರದ್ದುಪಡಿಸಿ, ಮರು ಪರೀಕ್ಷೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಾದ್ಯಮಗಳ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿರುವುದು ನೋಡಿ ಸಂಕಟವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಸರಕಾರ ಮಾಡಿರುವ ಅನ್ಯಾಯವನ್ನು ಒಪ್ಪಿಕೊಳ್ಳದೇ ಸಮರ್ಥಿಸಿಕೊಳ್ಳುತ್ತಿರುವ ಅಧಿಕಾರಿಗಳ ನಡೆ ಖಂಡನೀಯ ಎಂದಿದ್ದಾರೆ.
ಸುಮಾರು 1 ಲಕ್ಷದ 36ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಗ್ರಾಮೀಣ ಹಿನ್ನೆಲೆಯ ಕನ್ನಡ ಮಾಧ್ಯಮದವರು. ಕೆಲವು ವರ್ಷಗಳಿಂದಲೂ ಇವರು ಕನ್ನಡ ಮಾಧ್ಯಮದ ಮೂಲಕವೇ ಕೆಎಎಸ್ ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿದ್ದವರು. ಇಂತವರಿಗೆ ಸರಿಯಾಗಿ ಅರ್ಥವಾಗದ ರೀತಿಯಲ್ಲಿ ಪ್ರಶ್ನೆ ನೀಡಿದ್ದರ ಹಿಂದೆ ಯಾವ ಉದ್ದೇಶವಿದೆ? ಸುಮಾರು 60 ಅಂದರೆ 120 ಅಂಕಗಳ ಪ್ರಶ್ನೆಗಳಲ್ಲಿ ಲೋಪವಿದ್ದು, ಇದರ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದ್ದಾರೆ.
ಒತ್ತಾಯಗಳು: ಕೆಪಿಎಸ್ಸಿ ಕೂಡಲೇ ಮರು ಪರೀಕ್ಷೆಗೆ ಆದೇಶ ಹೊರಡಿಸಬೇಕು. ಪರೀಕ್ಷೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ವಹಿಸಬೇಕು. ಕೆಪಿಎಸ್ಸಿ ನಡೆಸುವ ಎಲ್ಲ ಪರೀಕ್ಷೆಯ ಪ್ರಶ್ನೆಪತ್ರಿಕೆ ಕನ್ನಡದಲ್ಲಿ ಸಿದ್ಧವಾಗುವಂತೆ ಆದೇಶ ಹೊರಡಿಸಬೇಕು.
‘ಕರ್ನಾಟಕದಲ್ಲಿ ನಡೆಯುವ ಎಲ್ಲ ಪರೀಕ್ಷೆಗಲ ಪ್ರಶ್ನೆ ಪತ್ರಿಕೆ ಮೊದಲು ಕನ್ನಡದಲ್ಲಿ ತಯಾರಾಗಬೇಕು. ಅದನ್ನು ನಂತರ ಇಂಗ್ಲಿಷ್ಗೆ ಅನುವಾದ ಮಾಡಿಸಬೇಕು. ಆದರೆ ಇದನ್ನು ಕೆಪಿಎಸ್ಸಿ ಅನುಸರಿದೇ ಬೇಜವಾಬ್ಧಾರಿ ಪ್ರದರ್ಶಿಸಿದೆ. ಕರ್ನಾಟಕದ ಪರೀಕ್ಷೆಗಳಲ್ಲಿ ಮೊದಲು ಇಂಗ್ಲಿಷ್ ಭಾಷೆಯಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಅದನ್ನು ಕನ್ನಡಕ್ಕೆ ಅನುವಾದ ಮಾಡುವುದು ಅವೈಜ್ಞಾನಿಕ ಮತ್ತು ಕನ್ನಡ ವಿರೋಧಿ ಧೋರಣೆಯಾಗಿದೆ’
-ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ







