ಕೆಪಿಎಸ್ಸಿ ಪ್ರೊಬೇಷನರಿ ಹುದ್ದೆ | ಫಲಿತಾಂಶ ತಡೆಹಿಡಿದು, ಮರುಪರೀಕ್ಷೆ ನಡೆಸಿ : ಕರವೇ ನಾರಾಯಣಗೌಡ

ಬೆಂಗಳೂರು : ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆ(ಡಿ.29ಕ್ಕೆ ನಡೆದ)ಯಲ್ಲಿಯೂ ಅನೇಕ ಲೋಪಗಳು ಆಗಿವೆ. ಆದ್ದರಿಂದ ಆ ಪರೀಕ್ಷೆಯ ಫಲಿತಾಂಶವನ್ನು ತಡೆಹಿಡಿದು, ಮರು ಪರೀಕ್ಷೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ರವಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ದುಂದು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ಪರೀಕ್ಷಾ ಲೋಪಗಳಿಗೆ ಕಾರಣರಾದ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಕೂಡಲೇ ಸರಕಾರ ವಜಾಗೊಳಿಸಬೇಕು. ಕೆಪಿಎಸ್ಸಿ ಪರೀಕ್ಷಾ ಅಭ್ಯರ್ಥಿಗಳ ಪರವಾಗಿ ಸರಕಾರ ಏನನ್ನು ಮಾತಾಡುತ್ತಿಲ್ಲ. ಅದಕ್ಕಾಗಿ ಫೆ.18ರಂದು ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯ ದಿನಾಂಕ ಘೋಷಣೆ ಆದ ತಕ್ಷಣ ಕೆಪಿಎಸ್ಸಿ ಯವರು ಫಲಿತಾಂಶ ಪ್ರಕಟ ಮಾಡಿದ್ದಾರೆ. ಯಾಕೆ ಇಷ್ಟೊಂದು ಆತುರ, ಜತೆಗೆ ಕೆಪಿಎಸ್ಸಿಯಿಂದ ಯಾವುದೇ ಅನ್ಯಾಯವಾಗಿಲ್ಲ ಎನ್ನುವ ಪ್ರಕಟನೆ ಕೂಡ ನೀಡಿದೆ. ಕೆಪಿಎಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೆಪಿಎಸ್ಸಿಯಲ್ಲಿರುವ ಎಲ್ಲ ಅಧಿಕಾರಿಗಳು ಆದಷ್ಟು ಬೇಗ ಜೈಲಿಗೆ ಹೋಗುತ್ತಾರೆ ಎಂದು ತಿಳಿಸಿದರು.
ಕನ್ನಡದ ಬಗ್ಗೆ ಅಭಿಮಾನ ಇರುವ ಸಿದ್ದರಾಮಯ್ಯ ಅವರು ಕೆಪಿಎಸ್ಸಿಯ ಅನ್ಯಾಯವನ್ನು ಸರಿಪಡಿಸಬೇಕು. ಪ್ರತಿಭಟನೆ ಮುಗಿಯುಷ್ಟರಲ್ಲಿ ನ್ಯಾಯಸಿಗಬೇಕು. ಇಲ್ಲವಾದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ. ಕನ್ನಡದ ವಿಚಾರ ಬಂದಾಗ ನಾನು ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಶಾಲೆಯಲ್ಲಿ ಓದಿದವರಿಗೆ ಕನ್ನಡ ನೆಲದಲ್ಲಿ ಭದ್ರತೆಯಿಲ್ಲದಿದ್ದರೆ, ಯಾವ ಭಾಷೆಯನ್ನು ಒಪ್ಪಿಕೊಳ್ಳಬೇಕು. ನಮ್ಮದು ಕನ್ನಡ ಸರಕಾರ ಎಂದು ಹೇಳಿಕೊಳ್ಳುತ್ತೀರಿ ಯಾವ ಸೀಮೆ ಸರಕಾರ ಎಂದು ಕಿಡಿಕಾರಿದರು.
ಎಕ್ಸ್ ನಲ್ಲಿ ಅಭಿಯಾನ: ಕೆಪಿಎಸ್ಸಿ ಫಲಿತಾಂಶ ತಡೆಹಿಡಿದು, ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ, ಫೆ.17ರ ಸಂಜೆ 5ರಿಂದ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕೆಪಿಎಸ್ಸಿ ಮೋಸ, ಕೆಪಿಎಸ್ಸಿ ದ್ರೋಹ ಎಂಬ ಹ್ಯಾಶ್‍ಟ್ಯಾಗ್ ಮೂಲಕ ಎಕ್ಸ್ ನಲ್ಲಿ ಅಭಿಯಾನ ನಡೆಸಲಾಗುತ್ತದೆ.







