ಕರ್ನಾಟಕ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಎಲೆಕ್ಟ್ರಾನಿಕ್ ವ್ಯವಸ್ಥೆ ಬಳಸದ ಆರೋಪ: ರಾಷ್ಟ್ರೀಯ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿ ಕ್ರೀಡಾಪಟುಗಳು

ಸಾಂದರ್ಭಿಕ ಚಿತ್ರ
ಬೆಂಗಳೂರು: ಯಾವುದೇ ಎಲೆಕ್ಟ್ರಾನಿಕ್ ವ್ಯವಸ್ಥೆ ಇಲ್ಲದೆ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟವನ್ನು ನಡೆಸಿರುವ ಹಿನ್ನೆಲೆಯಲ್ಲಿ, ಮುಂಬರುವ ರಾಷ್ಟ್ರೀಯ ಯುವ ಚಾಂಪಿಯನ್ಶಿಪ್ ಗೆ ಕರ್ನಾಟಕದ ಅಂಡರ್-18 ಕ್ರೀಡಾಪಟುಗಳು ಸಲ್ಲಿಸಿರುವ ನಮೂದುಗಳನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ತಿರಸ್ಕರಿಸುವ ಸಾಧ್ಯತೆಯಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ನವೆಂಬರ್ ನಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ ಗೇಮ್ಸ್ ಗೆ ಅರ್ಹತೆ ಪಡೆಯಲು ಈ ಕ್ರೀಡಾಕೂಟ ಪ್ರಮುಖ ವೇದಿಕೆಯಾಗಿರುವುದರಿಂದ, AFI ನಮೂದುಗಳನ್ನು ತಿರಸ್ಕರಿಸಿದರೆ ರಾಜ್ಯದ ಕ್ರೀಡಾಪಟುಗಳಿಗೆ ಭಾರಿ ನಿರಾಸೆಯಾಗುವ ಸಾಧ್ಯತೆಯಿದೆ.
ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಗಸ್ಟ್ 11 ಮತ್ತು 12ರಂದು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ (KAA) ಆಯೋಜಿಸಿದ್ದ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟವನ್ನು ಯಾವುದೇ ಎಲೆಕ್ಟ್ರಾನಿಕ್ ವ್ಯವಸ್ಥೆ ಬಳಸದೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಕೂಟದಲ್ಲಿ ರಾಜ್ಯದ ಹಲವು ದಾಖಲೆಗಳು ಮುರಿಯುವುದರ ಜೊತೆಗೆ ಹೊಸ ದಾಖಲೆಗಳೂ ನಿರ್ಮಾಣವಾಗಿವೆ. ಆದರೆ, ಆಗಸ್ಟ್ 1ರಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಹೊರಡಿಸಿದ್ದ ಸುತ್ತೋಲೆಯ ಪ್ರಕಾರ, ಅರ್ಹತಾ ಸಾಧನೆಗಳನ್ನು ದಾಖಲಿಸಲು ಎಲೆಕ್ಟ್ರಾನಿಕ್ ವ್ಯವಸ್ಥೆಯ ಬಳಕೆ ಕಡ್ಡಾಯವಾಗಿತ್ತು.
“ಸಾಧನೆಯನ್ನು ರಾಷ್ಟ್ರೀಯ ಅಥವಾ ರಾಜ್ಯ ಚಾಂಪಿಯನ್ಶಿಪ್ ಗಳಲ್ಲಿ, ಇಲ್ಲವೇ ಎಲೆಕ್ಟ್ರಾನಿಕ್ ವ್ಯವಸ್ಥೆ ಬಳಸಿದ AFI ಮಾನ್ಯತೆ ಪಡೆದ ಚಾಂಪಿಯನ್ಶಿಪ್ಗಳಲ್ಲಿ ಸಾಧಿಸಿರಬೇಕು. ಆನ್ಲೈನ್ ನಮೂದು ಸಲ್ಲಿಸುವಾಗ ಸಾಧನೆಯ ಪುರಾವೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕು” ಎಂದು AFI ಸುತ್ತೋಲೆಯಲ್ಲಿ ತಿಳಿಸಿದೆ.
ರಾಜ್ಯದ ಹಲವು ಕ್ರೀಡಾಪಟುಗಳು ಯೂತ್ ನ್ಯಾಷನಲ್ಸ್ ಗೆ ಅಗತ್ಯವಿರುವ ಅರ್ಹತಾ ಅಂಕಗಳನ್ನು ತಲುಪಿದ್ದರೂ, ಸ್ಪರ್ಧೆಯ ವೇಳೆ ಟ್ರ್ಯಾಕ್ ವಿಭಾಗದಲ್ಲಿ ಕೈಗಡಿಯಾರ ಹಾಗೂ ಫೀಲ್ಡ್ ವಿಭಾಗದಲ್ಲಿ ಅಳತೆ ಟೇಪ್ ಗಳನ್ನು ಬಳಸಲಾಗಿದೆ. ನಿಖರ ಫಲಿತಾಂಶ ದಾಖಲಿಸುವ ದೃಷ್ಟಿಯಿಂದ ಇವುಗಳನ್ನು ಹಳೆಯ ವಿಧಾನಗಳೆಂದು ಪರಿಗಣಿಸಲಾಗುತ್ತದೆ.
ಎಲೆಕ್ಟ್ರಾನಿಕ್ ವ್ಯವಸ್ಥೆಯ ಕೊರತೆಯಿಂದ ಸ್ಪರ್ಧೆಯ ಫಲಿತಾಂಶಗಳನ್ನು ಪ್ರಕಟಿಸುವಲ್ಲಿಯೂ ವಿಳಂಬವಾಗಿದೆ. ಇದರಿಂದ ಕ್ರೀಡಾಪಟುಗಳಲ್ಲಿ ಮತ್ತಷ್ಟು ಗೊಂದಲ ಉಂಟಾಗಿದೆ.
ಈ ಕುರಿತು ಸ್ಪಷ್ಟನೆ ಪಡೆಯಲು KAA ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
AFIಗೆ ನಮೂದುಗಳನ್ನು ಸಲ್ಲಿಸಲು ಆಗಸ್ಟ್ 19 ಕೊನೆಯ ದಿನಾಂಕವಾಗಿದೆ. ಹೀಗಾಗಿ ಎಲೆಕ್ಟ್ರಾನಿಕ್ ವ್ಯವಸ್ಥೆ ಬಳಕೆಯಾಗದಿರುವುದು ರಾಜ್ಯದ ಕ್ರೀಡಾಪಟುಗಳ ರಾಷ್ಟ್ರೀಯ ಮಟ್ಟದ ಅವಕಾಶಗಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಬೇರೆ ಬೇರೆ ಕಾರಣಗಳಿಂದ ಎರಡು ಬಾರಿ ಮರುನಿಗದಿಯಾಗಿದ್ದ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟವು U-14, U-16, U-18 ಮತ್ತು U-20 ವಿಭಾಗಗಳಲ್ಲಿ ನಡೆಯಿತು. ಆರಂಭದಲ್ಲಿ ಆಗಸ್ಟ್ 6 ಮತ್ತು 7ರಂದು ಕೂಟ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ರಾಯಚೂರಿನಲ್ಲಿ ಸಿಬಿಎಸ್ಇ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ದಿನಾಂಕವನ್ನು ಮರುನಿಗದಿಪಡಿಸಲಾಗಿತ್ತು.
ಮುಂಬರುವ ರಾಷ್ಟ್ರೀಯ ಯುವ ಚಾಂಪಿಯನ್ಶಿಪ್ (U-18) ಸೆಪ್ಟೆಂಬರ್ 1ರಿಂದ ಲುಧಿಯಾನದಲ್ಲಿ ನಡೆಯಲಿದೆ. ದಕ್ಷಿಣ ವಲಯ ಚಾಂಪಿಯನ್ಶಿಪ್ ಸೆಪ್ಟೆಂಬರ್ 14ರಿಂದ ಪುದುಚೇರಿಯಲ್ಲಿ ನಡೆಯಲಿದ್ದು, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅರ್ಹತೆ ಪಡೆದ ವಿಜೇತರು ಈ ಎರಡೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ಪಡೆಯಲಿದ್ದಾರೆ.






