ತಮಿಳುನಾಡಿಗೆ ಕಾವೇರಿ ನೀರು | ಸಿಡಬ್ಲ್ಯೂಎಂಎ ಆದೇಶ ಖಂಡಿಸಿ ಆ.13ಕ್ಕೆ ಕರ್ನಾಟಕ ಬಂದ್ : ವಾಟಾಳ್ ನಾಗರಾಜ್

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ(ಸಿಡಬ್ಲ್ಯೂಎಂಎ)ಯ ಆದೇಶ ಖಂಡಿಸಿ, ಕನ್ನಡಪರ ಹಾಗೂ ರೈತ ಸಂಘಟನೆಗಳ ಒಕ್ಕೂಟದಿಂದ ಆ.13ರಂದು ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕನ್ನಡಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಆ.13ರ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ‘ಅಖಂಡ ಕರ್ನಾಟಕ ಬಂದ್’ ಮಾಡಲು ನಿರ್ಧರಿಸಿದ್ದೇವೆ. ರಾಜ್ಯದ ಜನ ಇದನ್ನು ವಿರೋಧಿಸಬಾರದು, ಎಲ್ಲ ರೈತರು ಬಂದ್‍ಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ನಿಜವಾಗಿಯೂ ತಮಿಳುನಾಡು ರಾಜ್ಯದ ಜೊತೆಗೆ ಯುದ್ಧ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ನಾವೆಲ್ಲಾ ಮನುಷ್ಯರು, ಒಬ್ಬರಿಗೊಬ್ಬರು ಜೊತೆಗೆ ಬದುಕಬೇಕು. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡಿನವರು ಮೊದಲಿನಿಂದಲೂ ಕರ್ನಾಟಕ ರಾಜ್ಯಕ್ಕೆ ತೀವ್ರವಾದ ತೊಂದರೆ ನೀಡುತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಆಕ್ಷೇಪಿಸಿದರು.
ಸಿಡಬ್ಲ್ಯೂಆರ್‍ಸಿ, ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಹೀಗಾದರೆ ಕೆಆರ್‍ಎಸ್ ಸಂಪೂರ್ಣ ಖಾಲಿ ಮೈದಾನದಂತಾಗುತ್ತದೆ. ಆದುದರಿಂದ ನಾವು ಕರೆ ನೀಡಿರುವ ಕರ್ನಾಟಕ ರಾಜ್ಯ ಬಂದ್‍ನಲ್ಲಿ ರೈತರು, ಸಾರಿಗೆ ಕಾರ್ಮಿಕರು, ವ್ಯಾಪಾರಿಗಳು ಹಾಗೂ ವಿವಿಧ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ತಮಿಳುನಾಡಿನ ಮುಖ್ಯಮಂತ್ರಿ ಜೊಸೇಫ್ ವಿಜಯ್ ಅವರು ಕರ್ನಾಟಕಕ್ಕೆ ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಬರುವುದಾದರೆ ಆ ದಿನ ನಾವು ಅವರು ಆಗಮಿಸಲಿರುವ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕುತ್ತೇವೆ. ಸೌಹಾರ್ದಯುತವಾಗಿ ಬಂದು ಬೇರೆ ವಿಚಾರಗಳ ಚರ್ಚೆ ಮಾಡುವುದಿದ್ದರೆ, ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಆದರೆ, ಇದು ಸರ್ವಪಕ್ಷ ಸಭೆ ಅಲ್ಲ, ಇದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಭೆಯಾಗಿದೆ. ನೀರಾವರಿ ತಜ್ಞರು, ಕನ್ನಡಪರ ಸಂಘಟನೆಗಳು, ರೈತರು, ನಾಡಿನ ಜನರನ್ನು ಆಹ್ವಾನಿಸದೆ ಸಭೆ ಮಾಡಲಾಗುತ್ತಿದೆ. ಇದನ್ನು ನಾಡಿನ ಜನತೆ ಒಪ್ಪುವುದಿಲ್ಲ. ನಿಮ್ಮ ನಾಟಕೀಯ ಸರ್ವಪಕ್ಷ ಸಭೆಯನ್ನು ನಾವು ಒಪ್ಪಲ್ಲ ಎಂದು ಅವರು ಕಿಡಿಕಾರಿದರು.
ಸರ್ವಪಕ್ಷದ ಸಭೆ ಕರೆಯುವ ಬದಲು ತುರ್ತು ಅಧಿವೇಶನ ಕರೆದು, ಎರಡು ದಿನ ಸದನದಲ್ಲಿ ಚರ್ಚೆ ಮಾಡಬೇಕಿತ್ತು. ಉತ್ತರ ಕರ್ನಾಟಕದಲ್ಲಿ ಮಹದಾಯಿ, ಹೈದ್ರಾಬಾದ್ ಕರ್ನಾಟಕ ಹೋರಾಟಗಾರರಿದ್ದಾರೆ. ಅವರೆಲ್ಲರನ್ನೂ ಸಭೆಗೆ ಆಹ್ವಾನಿಸಬೇಕು. ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್‍ನವರು ಸೇರಿದರೆ ಸಾಕೇ? ಈ ಅವಿವೇಕದ ಸಭೆಯನ್ನು ಒಪ್ಪುವುದಿಲ್ಲ ಎಂದು ಎಚ್ಚರಿಸಿದರು.
ಸಭೆಯಲ್ಲಿ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು, ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ಕೆ.ಆರ್.ಕುಮಾರ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪ್ರಮುಖ ಆಗ್ರಹಗಳು: ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶವನ್ನು ತಿರಸ್ಕರಿಸುತ್ತೇವೆ. ಮೇಕೆದಾಟು ಯೋಜನೆ ಕೂಡಲೇ ಜಾರಿಯಾಗಬೇಕು. ಮಹದಾಯಿ, ಕಳಸಾ-ಬಂಡೂರಿ ಕಾರ್ಯಗತವಾಗಬೇಕು. ಬೆಳಗಾವಿ ಉಳಿಯಬೇಕು, ಎಂಇಎಸ್ ನಿಷೇಧಿಸಬೇಕು. ಗಡಿನಾಡು ಅಭಿವೃದ್ಧಿಯಾಗಬೇಕು. ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಅಗತ್ಯ ಅನುದಾನ ನೀಡಬೇಕು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು. ಆಲಮಟ್ಟಿ ಜಲಾಶಯ ಎತ್ತರಿಸಬೇಕು. ಕರ್ನಾಟಕದಲ್ಲಿ ಹಿಂದಿ ಸೇರಿದಂತೆ ಅನ್ಯಭಾಷೆಗಳ ದಬ್ಬಾಳಿಕೆ ನಿಲ್ಲಬೇಕು. ಪರಭಾಷೆಗಳ ಚಿತ್ರಗಳು ಬಹಿಷ್ಕಾರವಾಗಲಿ. ಬಿಡದಿ ಉಪನಗರ ಯೋಜನೆ ನಿಲ್ಲಿಸಬೇಕು ಎಂದು ವಾಟಾಳ್ ನಾಗರಾಜ್ ಮಂಡಿಸಿದರು.
ಅಗತ್ಯ ಸೇವೆಗಳಿಗೆ ವಿನಾಯಿತಿ: ‘ಆಸ್ಪತ್ರೆ, ಔಷಧ ಅಂಗಡಿಗಳು, ಹಾಲು, ಹಣ್ಣು ಸೇರಿದಂತೆ ತುರ್ತು ಸೇವೆಗಳಿಗೆ ಬಂದ್‍ನಿಂದ ವಿನಾಯಿತಿ ನೀಡಲಾಗಿದೆ. 12 ಗಂಟೆಗಳ ಬಂದ್ ಅವಧಿಯಲ್ಲಿ ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಕಾವೇರಿ ನೀರಿನ ವಿವಾದದ ಹಿನ್ನೆಲೆಯಲ್ಲಿ ನಡೆಯಲಿರುವ ಕರ್ನಾಟಕ ಬಂದ್ ಶಾಂತಿಯುತವಾಗಿ ನಡೆಯುವಂತೆ ಎಲ್ಲರೂ ಸಹಕರಿಸಬೇಕು’ ಎಂದು ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಬಂದ್ ಮಾಡುವ ಅಗತ್ಯವಿಲ್ಲ: ‘ಇದುವರೆಗೂ ತಮಿಳುನಾಡಿಗೆ ಹರಿದಿರುವ ನೀರು ಅಣೆಕಟ್ಟುಗಳಿಂದ ಬಿಟ್ಟಿರುವ ನೀರಲ್ಲ, ಬೆಂಗಳೂರು ಸುತ್ತಮುತ್ತ ಬಿದ್ದ ಮಳೆ ನೀರು ಹರಿದು ಹೋಗಿರುವ ನೀರಿನ ಪ್ರಮಾಣ. ಇಷ್ಟಾದರೂ ಪ್ರತಿಪಕ್ಷಗಳು ಹಾಗೂ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಆಗಸ್ಟ್ 13ರಂದು ಕರ್ನಾಟಕ ರಾಜ್ಯ ಬಂದ್‍ಗೆ ಕರೆ ನೀಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಾವೇ ರೈತರ ಪರವಾಗಿದ್ದು, ಬಂದ್ ಮಾಡುವ ಅಗತ್ಯವಿಲ್ಲ. ಇದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ’
-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ






