‘ಮೆಡಿಕಲ್ ಸ್ಪಾ’ಗಳನ್ನು ಅಧಿಕೃತವಾಗಿ ‘ವೈದ್ಯಕೀಯ ಸಂಸ್ಥೆಗಳುʼ ಎಂದು ಘೋಷಿಸಿದ ರಾಜ್ಯ ಸರಕಾರ

ಸಾಂದರ್ಭಿಕ ಚಿತ್ರ (Image by pressfoto on Freepik)
►ಲೇಸರ್ ಚಿಕಿತ್ಸೆ, ಕೂದಲು ಕಸಿ, ಕಾಸ್ಮೆಟಿಕ್ ಚಿಕಿತ್ಸೆಯ ಗುಣಮಟ್ಟದ ಮೇಲೆ ಕಣ್ಗಾವಲಿಡಲು ಹೊಸ ನಿಯಮ ಜಾರಿ ಎಂದ ಸಚಿವ ಗುಂಡೂರಾವ್
ಬೆಂಗಳೂರು: ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಸಂಬಂಧಿತ ಸೇವೆಗಳನ್ನು ನೀಡುವ ಮೆಡಿಕಲ್ ಸ್ಪಾಗಳನ್ನು ಅಧಿಕೃತವಾಗಿ ‘ವೈದ್ಯಕೀಯ ಸಂಸ್ಥೆಗಳು' ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ.
ಆರೋಗ್ಯ ಸೇವೆಗಳ ಮೇಲೆ ಹೆಚ್ಚಿನ ಕಣ್ಗಾವಲಿರಿಸುವುದು ಅತ್ಯಗತ್ಯ ಎಂಬುದನ್ನು ಮನಗಂಡು ಮೆಡಿಕಲ್ ಸ್ಪಾಗಳನ್ನು ಅಧಿಕೃತವಾಗಿ ‘ವೈದ್ಯಕೀಯ ಸಂಸ್ಥೆಗಳು' ಎಂದು ಘೋಷಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಂತ್ರಣಕ್ಕೆ ತರಲಾಗಿದೆ.
ಶನಿವಾರ ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಡಿನ ಜನರ ಆರೋಗ್ಯ ಕಾಳಜಿಯನ್ನು ಕಡೆಗಣಿಸಿ ಕೇವಲ ವ್ಯಾಪಾರ ದೃಷ್ಟಿಯಿಂದ ಅನಧಿಕೃತವಾಗಿ ತಲೆಎತ್ತಿದ್ದ ಮೆಡಿಕಲ್ ಸ್ಪಾಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಲವಾರು ಗಂಭೀರ ದೂರುಗಳು ಬಂದಿದ್ದಲ್ಲದೆ, ಮಾಧ್ಯಮಗಳಲ್ಲೂ ವರದಿ ಬಂದಿದ್ದವು. ಪರಿಣಿತರಲ್ಲದಿದ್ದರೂ ಕೆಮಿಕಲ್ಸ್ ಬಳಸಿ ಸೌಂದರ್ಯವರ್ಧಕ ಚಿಕಿತ್ಸೆ ಮಾಡುವ, ವೃದ್ಧರ ಮೂಳೆ-ಕೀಳು ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡು ಶಾಶ್ವತ ಪರಿಹಾರ ಸಿಗಲಿದೆ ಎಂದು ನಂಬಿಸಿ ರೇಡಿಯೇಷನ್ ಥೆರಫಿ ಮಾಡುತ್ತಿದ್ದ ಜಾಲಗಳನ್ನು ಪತ್ತೆಹಚ್ಚಿದ್ದ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು, ಆದರೂ, ಹೆಚ್ಚಿನ ಕಣ್ಗಾವಲಿರಿಸುವುದು ಅತ್ಯಗತ್ಯ ಎಂಬುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ, 2007ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿ ಈಗಾಗಲೇ ಜಾರಿ ಮಾಡಿದ್ದು, ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಸಂಬಂಧಿತ ಸೇವೆಗಳನ್ನು ನೀಡುವ ಮೆಡಿಕಲ್ ಸ್ಪಾಗಳನ್ನು ಅಧಿಕೃತವಾಗಿ ವೈದ್ಯಕೀಯ ಸಂಸ್ಥೆಗಳು ಎಂದು ಘೋಷಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಂತ್ರಣಕ್ಕೆ ತರಲಾಗಿದೆ ಎಂದು ಅವರು ವಿವರಿಸಿದರು.
ಅದರಲ್ಲೂ, ಬೊಟಿಕ್ಸ್, ಲೇಸರ್ ಚಿಕಿತ್ಸೆಗಳು, ಲಿಪೋಸೆಕ್ಷನ್, ಕೂದಲು ಕಸಿ ಹಾಗೂ ಶರಿರಕ್ಕೆ ಸಂಬಂಧಿಸಿದಂತೆ ಇತರೆ ಸೌಂದರ್ಯವರ್ಧಕ (ಕಾಸ್ಮೆಟಿಕ್) ಚಿಕಿತ್ಸೆಯ ಗುಣಮಟ್ಟದ ಮೇಲೆ ಕಣ್ಗಾವಲಿಡಲು ಈ ನಿಯಮ ತರಲಾಗಿದೆ. ಈ ಆದೇಶವು ಅನಧಿಕೃತವಾಗಿ ವೈದ್ಯಕೀಯ ಅಭ್ಯಾಸ ಮಾಡುವ ಮತ್ತು ವೃತ್ತಿಪರರಲ್ಲದವರು ನಡೆಸುತ್ತಿರುವ ಕಾಸ್ಮೆಟಿಕ್ ಸ್ಕಿನ್ ಕ್ಲಿನಿಕ್ಗಳು, ಕೊರಿಯನ್ ಚರ್ಮದ ಆರೈಕೆ ಕೇಂದ್ರಗಳು, ಮಸಾಜ್ ಸೆಂಟರ್ಗಳು ಮತ್ತು ಸ್ಪಾಗಳನ್ನು ನಿಯಂತ್ರಿಸಲು ಅಗತ್ಯವಾಗಿದೆ ಎಂದೂ ಅವರು ಉಲ್ಲೇಖಿಸಿದರು.
ಈ ಆದೇಶದಿಂದಾಗಿ ವೈದ್ಯಕೀಯ ಕ್ಷೇತ್ರದ ವಂಚಕರ ಹಾವಳಿಗೆ ಕಡಿವಾಣ ಬೀಳಲಿದೆ. ಅದಕ್ಕಾಗಿ ಸಂಬಂಧಿತ ಆರೋಗ್ಯ ವೃತ್ತಿಪರರ ಸೇವೆಗಳನ್ನೂ ಸಹ ಈ ಅಧಿಸೂಚನೆಯ ನಿಯಂತ್ರಣದ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಯಾವುದಕ್ಕೆ ಅನ್ವಯ:
► ಶ್ರವಣಶಾಸ್ತ್ರಜ್ಞರು
► ಸ್ಪೀಚ್ ಥೆರಪಿ
► ಆಹಾರ ತಜ್ಞರು
► ದೈಹಿಕ ಮನೋವಿಜ್ಞಾನ/ ಕ್ಲಿನಿಕಲ್ ಮನೋವಿಜ್ಞಾನ
► ಮೂಳೆ, ಕೀಲು ಹಾಗೂ ಸ್ನಾಯು ಚಿಕಿತ್ಸೆ
► ಪಾದ ಚಿಕಿತ್ಸೆ
► ವಿಕಿರಣ ಚಿಕಿತ್ಸೆ ಅಥವಾ ಎಕ್ಸ್-ರೇ
► ಕ್ಷ-ಕಿರಣ ಮತ್ತು ವೈದ್ಯಕೀಯ ಇಮೇಜಿಂಗ್
► ಉಸಿರಾಟದ ಚಿಕಿತ್ಸೆ
► ಸೋನೋಗ್ರಫಿ
► ದಂತ ಮತ್ತು ಆಕ್ಯುಪೇಷನಲ್ ಥೆರಪಿ
► ಇತರೆ ಅಲೈಡ್ ಹೆಲ್ತ್ ವ್ಯವಸ್ಥೆಗಳು
ಉದಾಹರಣೆಗೆ ಫಿಸಿಯೋಥೆರಪಿಸ್ಟ್, ಆಕ್ಯುಪೇಷನಲ್ ಥೆರಪಿಸ್ಟ್, ಇತ್ಯಾದಿ







