ರಾಜ್ಯ ಬಜೆಟ್ 2025 | ‘ಗೃಹಜ್ಯೋತಿ’ ಯೋಜನೆಗೆ 10,100 ಕೋಟಿ ರೂ.ಅನುದಾನ

ಬೆಂಗಳೂರು : ‘ಗೃಹಜ್ಯೋತಿ’ ಯೋಜನೆಯಡಿ 1.62 ಕೋಟಿ ಗ್ರಾಹಕರು ನೊಂದಾಯಿಸಿದ್ದಾರೆ. ಈ ಯೋಜನೆಗೆ 2024-25ನೇ ಸಾಲಿನಲ್ಲಿ 9,657 ಕೋಟಿ ರೂ. ಒದಗಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ 10,100 ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಸರಕಾರದ ವತಿಯಿಂದ 10 ಎಚ್.ಪಿ.ವರೆಗಿನ ನೀರಾವರಿ ಪಂಪ್ ಸೆಟ್ ವಿದ್ಯುತ್ ಸರಬರಾಜಿಗಾಗಿ ಧನಸಹಾಯ ನೀಡುವ ಯೋಜನೆಯಡಿ 33.84 ಲಕ್ಷ ಪಂಪ್ ಸೆಟ್‍ಗಳಿಗೆ 16,021 ಕೋಟಿ ರೂ. ಒದಗಿಸಲಾಗಿದೆ. ಇದರಿಂದ ಒಂದು ಪಂಪ್‍ಸೆಟ್‍ಗೆ ಒಂದು ವರ್ಷಕ್ಕೆ ಸರಾಸರಿ 50 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ.
ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆಯನ್ನು ನೆರವೇರಿಸಲು ರಾಜ್ಯದ ಸ್ಥಾಪಿತ ಸಾಮರ್ಥ್ಯವನ್ನು 32 ಗಿಗಾವ್ಯಾಟ್ ನಿಂದ 60 ಗಿಗಾವ್ಯಾಟ್‍ಗೆ ಹೆಚ್ಚಿಸುವ ಗುರಿಯನ್ನು ಹಿಂದಿನ ಆಯವ್ಯಯದಲ್ಲಿ ನಿಗದಿಪಡಿಸಲಾಗಿದೆ. ಇದಕ್ಕಾಗಿ ಈ ಕೆಳಗಿನ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 31.83 ಗಿಗಾವ್ಯಾಟ್ ನಿಂದ 34.99 ಗಿಗಾವ್ಯಾಟ್‍ಗೆ ಹೆಚ್ಚಿಸಲಾಗಿದೆ.
2008 ರಿಂದ ನೆನೆಗುದಿಗೆ ಬಿದ್ದಿದ್ದ 13,000 ಕೋಟಿ ರೂ. ಯೋಜನಾ ವೆಚ್ಚದ 800 ಮೆಗಾವ್ಯಾಟ್ ಸಾಮರ್ಥ್ಯದ ಗೋದ್ನಾ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ಟಿಬಿಸಿಬಿ ಮಾದರಿಯಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಿದೆ. 10,240 ಕೋಟಿ ರೂ. ವೆಚ್ಚದ 2,000 ಮೆಗಾವ್ಯಾಟ್ ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲಾಂಟ್ ಅನುಷ್ಠಾನಕ್ಕಾಗಿ ವನ್ಯಜೀವಿ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆಯಾಗುವ ಇಂಧನದ ಶೇಖರಣೆಗಾಗಿ ಕೆಪಿಟಿಸಿಎಲ್ ಮೂಲಕ ಏಳು ಸಬ್ ಸ್ಟೇಷನ್‍ಗಳಲ್ಲಿ 1,000 ಮೆಗಾವ್ಯಾಟ್ ಅವರ್ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು 1,846 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುವುದು.
ರೈತರ ನೀರಾವರಿ ಪಂಪ್ ಸೆಟ್‍ಗಳ ವಿಕೇಂದ್ರೀಕೃತ ಫೀಡರ್ ಸೌರೀಕರಣ ಕಾರ್ಯವನ್ನು ಕುಸುಮ್-ಸಿ ಯೋಜನೆಯಡಿ ಕೈಗೊಳ್ಳಲಾಗಿದೆ. ಪ್ರಥಮ ಹಂತದಲ್ಲಿ 1,302 ಮೆಗಾವ್ಯಾಟ್ ಸಾಮಥ್ರ್ಯದ ಗುರಿ ಹೊಂದಲಾಗಿದ್ದು, 21 ಮೆಗಾವ್ಯಾಟ್ ಸಾಮಥ್ರ್ಯದ ಐದು ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ ಒಟ್ಟು 1,192 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕುಸುಮ್-ಬಿ ಅಡಿಯಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಸುವ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರಕಾರದ ಪಾಲನ್ನು ಶೇ.50ಕ್ಕೆ ಹೆಚ್ಚಿಸಿದ್ದು, ಫಲಾನುಭವಿಗಳು ಶೇ.20ರಷ್ಟನ್ನು ಮಾತ್ರ ಭರಿಸಬೇಕಾಗುತ್ತದೆ. ಈ ಯೋಜನೆಯಡಿ 40 ಸಾವಿರ ಪಂಪ್ ಸೆಟ್‍ಗಳಿಗೆ ಅನುಮೋದನೆ ನೀಡಲಾಗಿದ್ದು, ರಾಜ್ಯ ಸರಕಾರದ ಪಾಲು 752 ಕೋಟಿ ರೂ. ವೆಚ್ಚ ಮಾಡಲಾಗುವುದು.
ಪ್ರಸರಣ ಜಾಲದ ಬಲವರ್ಧನೆಗಾಗಿ 115 ಹೊಸ ಉಪಕೇಂದ್ರಗಳ ಸ್ಥಾಪನೆ, 411 ಉಪ ಕೇಂದ್ರಗಳ ಉನ್ನತೀಕರಣ ಹಾಗೂ 3,490.81 ಕಿ.ಮೀ ಗಳ ಪ್ರಸರಣಾ ಮಾರ್ಗದ ರಚನೆಯನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 8,833 ಕೋಟಿ ರೂ. ವೆಚ್ಚದಲ್ಲಿ 100 ಹೊಸ ಉಪಕೇಂದ್ರಗಳನ್ನು ಸ್ಥಾಪಿಸಲಾಗುವುದು.
ವಿತರಣಾ ಕ್ಷೇತ್ರದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 25,971 ಕೊಳವೆ ಬಾವಿಗಳ ವಿದ್ಯುದ್ದೀಕರಣ, 6,887 ಕುಡಿಯುವ ನೀರಿನ ಯೋಜನೆಗಳ ವಿದ್ಯುದ್ದೀಕರಣ, 1.94 ಲಕ್ಷ ವಿತರಣಾ ಪರಿವರ್ತಕಗಳ ಅಳವಡಿಕೆ, 51,975 ಎಚ್‍ಟಿ ಮಾರ್ಗ ಮತ್ತು 45,047 ಎಲ್‍ಟಿ ಮಾರ್ಗಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಗ್ರಾಮ ಪಂಚಾಯತಿಗಳಲ್ಲಿ, ಬೀದಿ ದೀಪಗಳ ವಿದ್ಯುತ್ ಬಿಲ್ಲಿನ ಹೊರೆಯನ್ನು ತಗ್ಗಿಸಲು ಪ್ರತ್ಯೇಕವಾದ ಫೇಸ್ ವೈರ್ ಅಳವಡಿಸುವ ಕಾಮಗಾರಿಯನ್ನು 850 ಕೋಟಿ ರೂ. ವೆಚ್ಚದಲ್ಲಿ ಎಸ್ಕಾಂಗಳ ಮೂಲಕ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಸ್ಥಾವರಗಳ ಸ್ಥಾಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೃಷಿ ಭೂಮಿಗೆ ಭೂ ಪರಿವರ್ತನೆ ಪ್ರಕ್ರಿಯೆಯಿಂದ ವಿನಾಯಿತಿ.
ವಿದ್ಯುತ್ ಪ್ರಸರಣ ವಲಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದುತ್ತಿರುವ ಇನ್‍ಫ್ರಾಸ್ಟ್ರಕ್ಚರ್ ಇನ್ವೆಸ್ಟ್‍ಮೆಂಟ್ ಟ್ರಸ್ಟ್ ಅನ್ನು ಕೆಪಿಟಿಸಿಎಲ್ ನಲ್ಲಿ ರಚಿಸಲು ರಾಜ್ಯ ಸರಕಾರವು ಅನುಮೋದನೆ ನೀಡಿದೆ. ಈ ಟ್ರಸ್ಟ್ ಮೂಲಕ 5 ಸಾವಿರ ಕೋಟಿ ರೂ. ಹೂಡಿಕೆಯನ್ನು ಸಂಗ್ರಹಿಸಿ, ವಿವಿಧ ಯೋಜನೆಗಳಿಗೆ ಉಪಯೋಗಿಸಲಾಗುವುದು.