Karnataka Budget 2026 | ಬಿತ್ತನೆಯಿಂದ ಮಾರುಕಟ್ಟೆವರೆಗೆ ರೈತರಿಗೆ ಸಮಗ್ರ ಬೆಂಬಲ: ಸಿದ್ದರಾಮಯ್ಯ

ಬೆಂಗಳೂರು: “ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆ” ಎಂಬ ದೃಢ ನಂಬಿಕೆಯಿಂದ ರಾಜ್ಯ ಸರ್ಕಾರವು ಕೃಷಿ ಅಭಿವೃದ್ಧಿಗೆ ಸಮಗ್ರ ತಂತ್ರ ರೂಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಇಂದು ಮಂಡಿಸಿರುವ 2026-27ನೇ ಸಾಲಿನ ಬಜೆಟ್ ನಲ್ಲಿ ಅವರು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದರು.
ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಸಮಗ್ರ ಬೆಂಬಲ ನೀಡುವ ನಾಲ್ಕು ಆಧಾರಸ್ತಂಭಗಳ ಮೇಲೆ ಸರ್ಕಾರ ಕೃಷಿ ಅಭಿವೃದ್ಧಿ ನೀತಿಯನ್ನು ರೂಪಿಸಿದೆ ಎಂದು ಅವರು ತಿಳಿಸಿದರು. ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಹಣಕಾಸು ನೆರವು, ಉತ್ತಮ ಗುಣಮಟ್ಟದ ಕೃಷಿ ಪರಿಕರಗಳ ಒದಗಿಕೆ ಹಾಗೂ ಕೊಯ್ಲೋತ್ತರ ಸಂಗ್ರಹಣೆ–ಮಾರುಕಟ್ಟೆ ಸಂಪರ್ಕಗಳ ವಿಸ್ತರಣೆ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ರೈತರ ಅಭಿವೃದ್ಧಿಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, 40 ಲಕ್ಷ ರೈತರಿಗೆ 468 ಕೋಟಿ ರೂ. ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲಾಗಿದೆ. 2,825 ಕೋಟಿ ರೂ. ವೆಚ್ಚದಲ್ಲಿ 7 ಲಕ್ಷ ರೈತರಿಗೆ ಹನಿ ನೀರಾವರಿ ಘಟಕ ಸ್ಥಾಪನೆ ಮಾಡಲಾಗಿದೆ ಹಾಗೂ 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ. ಇದೇ ಅವಧಿಯಲ್ಲಿ 363 ಕೋಟಿ ರೂ. ವೆಚ್ಚದಲ್ಲಿ 32,138 ಕೃಷಿ ಹೊಂಡಗಳ ನಿರ್ಮಾಣ ನಡೆದಿದೆ.
ಇದೇ ವೇಳೆ 51 ಲಕ್ಷ ರೈತರಿಗೆ 6,213 ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡಲಾಗಿದೆ. 36 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ 48,000 ಕೋಟಿ ರೂ. ಮೌಲ್ಯದ ಉಚಿತ ವಿದ್ಯುತ್ ಸಹಾಯಧನ ನೀಡಲಾಗಿದೆ. ಜೊತೆಗೆ 83 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಉತ್ಪಾದನೋತ್ತರ ಕೃಷಿ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲಾಗುವುದು. ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಉತ್ತೇಜನಕ್ಕಾಗಿ ‘ಮಿಲೆಟ್ ಹಬ್’ ಅನ್ನು ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆಯನ್ನಾಗಿ ರೂಪಿಸಲಾಗುವುದು.
ಕೃಷಿ ಉತ್ಪಾದಕತೆ ಹೆಚ್ಚಿಸಲು ಮಣ್ಣು, ನೀರು, ಬೀಜ ಹಾಗೂ ರಸಗೊಬ್ಬರ ಪರೀಕ್ಷಾ ಪ್ರಯೋಗಾಲಯಗಳಿಗೆ NABL ಮಾನ್ಯತೆ ಪಡೆಯುವ ಕ್ರಮ ಕೈಗೊಳ್ಳಲಾಗುವುದು. ದ್ವಿದಳಧಾನ್ಯಗಳ ನೂತನ ತಳಿಗಳ ಬಳಕೆಗೆ ನೀಡುವ ಸಹಾಯಧನವನ್ನೂ ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ‘ವಸುಧಾಮೃತ’ ಕಾರ್ಯಕ್ರಮ ಹಾಗೂ ಬೆಳೆಗಳಲ್ಲಿ ಕೀಟ–ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸಲು ‘ಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೆ ತರಲಾಗುವುದು.
ರೈತರಿಗೆ ಹವಾಮಾನ, ಮಾರುಕಟ್ಟೆ ಹಾಗೂ ಕೃಷಿ ತಾಂತ್ರಿಕ ಮಾಹಿತಿಯನ್ನು ತ್ವರಿತವಾಗಿ ನೀಡಲು ಕೃಷಿ ಇಲಾಖೆಯ ‘ರೈತ ಕರೆ ಕೇಂದ್ರ’ವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಉನ್ನತೀಕರಿಸಲಾಗುವುದು. ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ‘ಕೃಷಿ ಉದ್ಯಮ ತರಬೇತಿ ಕೇಂದ್ರ’ವನ್ನಾಗಿ ರೂಪಿಸುವುದಾಗಿ ತಿಳಿಸಿದರು.
ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ನಿಖರ ಬಿತ್ತನೆ ಮತ್ತು ನಾಟಿ ಯಂತ್ರಗಳನ್ನು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಗೆ ಸೇರಿಸಲಾಗುವುದು. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಎತ್ತು ಚಾಲಿತ ಮತ್ತು ಕೈಚಾಲಿತ ಉಪಕರಣಗಳನ್ನು ಒದಗಿಸುವ ಯೋಜನೆಯೂ ಜಾರಿಯಾಗಲಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ರೂಪಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆ ಜಾರಿಗೆ ತರಲಾಗುವುದು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಭತ್ತದ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆ ಹೆಚ್ಚಿಸುವ ಪರ್ಯಾಯ ತೇವ–ಒಣಗಿಸುವ ವಿಧಾನಗಳನ್ನು ಉತ್ತೇಜಿಸಲಾಗುವುದು.
ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ MSIL ಮೂಲಕ ‘ರೈತ ಮಾಲ್’ಗಳನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗುವುದು. ಕಳಪೆ ಬೀಜ ಮತ್ತು ಕೀಟನಾಶಕಗಳ ಮಾರಾಟ ತಡೆಯಲು ರಾಜ್ಯ ಮಟ್ಟದ ಸಲಹಾ ಸಮಿತಿಯನ್ನೂ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಇದಲ್ಲದೆ ತಜ್ಞರ ವರದಿಯ ಆಧಾರದ ಮೇಲೆ ಅಥಣಿ ಪಟ್ಟಣದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಅಗತ್ಯವಿರುವ ಪ್ರಾಥಮಿಕ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.







