Karnataka Budget | ಕುಂಬಾರ, ತಿಗಳ, ಕೊಡವ, ಉಪ್ಪಾರ, ಈಡಿಗ, ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮ ಸ್ಥಾಪನೆ

PC : x/@siddaramaiah
ಬೆಂಗಳೂರು : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿಯಲ್ಲಿ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರಾರಂಭ. ಹಾಗೂ ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಬಜೆಟ್ ಭಾಷಣ ಮಾಡಿದ ಅವರು, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು 30 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 50 ಕೋಟಿ ರೂ. ಒದಗಿಸಲಾಗುವುದು ಎಂದರು.
ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ 5 ಕೋಟಿ ರೂ.ಘಟಕ ವೆಚ್ಚದಲ್ಲಿ 50 ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಮತ್ತು ಮೈಸೂರು ನಗರದ ಧೋಬಿಘಾಟ್ಗಳಲ್ಲಿ ಮಡಿವಾಳ ಸಮಾಜದವರಿಗೆ ವಾಷಿಂಗ್ ಮೆಷಿನ್, ಡ್ರೈಯರ್ ಮತ್ತು ಐರನಿಂಗ್ ಮೆಷಿನ್ ಇತ್ಯಾದಿ ಸಾಮಗ್ರಿಗಳನ್ನು ಒಳಗೊಂಡಂತೆ ತಲಾ 75 ಲಕ್ಷ ರೂ. ಘಟಕ ವೆಚ್ಚದಲ್ಲಿ ಆಧುನಿಕ ಲಾಂಡ್ರಿಗಳನ್ನುಸ್ಥಾಪಿಸಲಾಗುವುದು. ನಿರುದ್ಯೋಗಿ ಯುವಕ, ಯುವತಿಯರು ಸ್ವಯಂ ಉದ್ಯೋಗಕ್ಕಾಗಿ ಆಧುನಿಕ ಲಾಂಡ್ರಿಗಳನ್ನು ಸ್ಥಾಪಿಸಲು 5 ಲಕ್ಷ ರೂ.ಗಳವರೆಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
2021ರ ಮಾ.31 ಅಂತ್ಯದವರೆಗೆ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ನಿಗಮಗಳಿಂದ ಪಡೆದ ಸಾಲದ ಅಸಲನ್ನು ಪಾವತಿ ಮಾಡುವವರಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಒಂದಾವರ್ತಿ ತಿರುವಳಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.
ಹಿಂದುಳಿದ ವರ್ಗಗಳ ಕಾರ್ಯಕ್ರಮಗಳ ಅನುಷ್ಠಾನ, ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಮತ್ತು ಈ ವರ್ಗಗಳ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಲು ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಹಿಂದುಳಿದ ವರ್ಗಗಳ ಪ್ರವರ್ಗ-1ರಡಿ ಬರುವ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡಲು ಉತ್ತೇಜಿಸುವ ಸಲುವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡುವ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸವಿತಾ ಸಮಾಜದವರು ಸಲೂನ್ ತೆರೆಯಲು 10ಲಕ್ಷ ರೂ. ವರೆಗೆ ಸಾಲ ಸವಿತಾ ಸಮಾಜದವರು ಸಲೂನ್ಗಳನ್ನು ತೆರೆಯಲು ಶೇ.4ರಷ್ಟು ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೆ ಸಾಲ ಮತ್ತು ಸಹಾಯಧನವನ್ನು ಮಂಜೂರು ಮಾಡಲಾಗುವುದು. ಹಿಂದುಳಿದ ವರ್ಗಗಳ 250 ಇಂಜಿನಿಯರಿಂಗ್ ಪದವೀಧರರಿಗೆ ಅವರ ತಾಂತ್ರಿಕ ಕೌಶಲ್ಯವನ್ನು ಉತ್ಕೃಷ್ಟಗೊಳಿಸಲು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಎನ್ಐಟಿ, ಐಐಟಿ, ಐಐಎಂಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ತರಬೇತಿ ಪಡೆಯಲು ತಲಾ ಎರಡು ಲಕ್ಷ ರೂ.ಗಳಂತೆ ಸಾಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದರು.







