ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 600 ಕೋಟಿ ರೂ.ವೆಚ್ಚದಲ್ಲಿ 10 ಜಿಟಿಟಿಸಿ ಕೇಂದ್ರಗಳ ಸ್ಥಾಪನೆ : ಸಿದ್ದರಾಮಯ್ಯ

ಸಾಂದರ್ಭಿಕ ಚಿತ್ರ |PC : gemini AI
ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ತಲಾ 60 ಕೋಟಿ ರೂ.ಗಳಂತೆ ಒಟ್ಟು 600 ವೆಚ್ಚದಲ್ಲಿ 10 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಬಜೆಟ್ ಭಾಷಣ ಮಾಡಿದ ಅವರು, ಸರಕಾರಿ ನೌಕರರನ್ನೊಳಗೊಂಡಂತೆ ವಿವಿಧ ಉದ್ದಿಮೆಗಳಲ್ಲಿ ಕೆಲಸಮಾಡುತ್ತಿರುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಒಂದು ದಿನದ ವೇತನ ಸಹಿತ ರಜೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಅವಲಂಬಿತರಿಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಅಡಿ ಒಟ್ಟು 43,936 ಅರ್ಹ ಫಲಾನುಭವಿಗಳಿಗೆ ಒಟ್ಟು 39 ಕೋಟಿ ರೂ.ಗಳ ಧನಸಹಾಯ ನೀಡಲಾಗಿದೆ ಎಂದರು.
ಆಶಾದೀಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು 5,062 ಅಭ್ಯರ್ಥಿಗಳ ಪರವಾಗಿ 18 ಕೋಟಿ ರೂ.ಗಳನ್ನು ಅರ್ಹ ಉದ್ಯೋಗದಾತರಿಗೆ ಮರುಪಾವತಿಸಲಾಗಿದೆ ಎಂದು ಹೇಳಿದರು.
ಇತರೆ ಪ್ರಮುಖ ಅಂಶಗಳು
* ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ 2025-26ನೇ ಸಾಲಿನಲ್ಲಿ 42 ಶ್ರಮಿಕ ವಸತಿ ಶಾಲೆಗಳಿಗೆ ಅನುಮೋದಿಸಲಾಗಿದೆ. 2026-27ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 62ಶ್ರಮಿಕ ವಸತಿ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಎಲ್ಲಾ 104ಶಾಲೆಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸಲಾಗುವುದು.
* ಕಾರ್ಮಿಕರ ಮಕ್ಕಳ ಕೌಶಲ್ಯ ತರಬೇತಿಗಾಗಿ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅತ್ಯಾಧುನಿಕ ಕೌಶಲ್ಯ ತರಬೇತಿ ಅಕಾಡಮಿಯನ್ನು 200 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ.
* ಅಸಂಘಟಿತ ಕಾರ್ಮಿಕರಿಗೆ ಕೌಶಲ್ಯಾಧಾರಿತ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಆನ್ಲೈನ್ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸುವ ‘ಕಾಯಕ ಭಾಗ್ಯ’ ಎಂಬ ಯೋಜನೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲಾಗುವುದು.
* ಕಾರ್ಮಿಕ ರಾಜ್ಯ ವಿಮಾ ಸೊಸೈಟಿ ರಚನೆಯಿಂದಾಗಿ ಪ್ರಸ್ತುತ ನೀಡಲಾಗುತ್ತಿರುವ ವೈದ್ಯಕೀಯ ಸೇವೆಗಳನ್ನು 50 ಲಕ್ಷ ವಿಮಾದಾರರಿಗೆ ಹಾಗೂ 150 ಲಕ್ಷ ಅವಲಂಬಿತರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಲಾಗುವುದು. ಹುಬ್ಬಳ್ಳಿ, ಇಂದಿರಾನಗರ, ಮೈಸೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಇಂದಿರಾನಗರದಲ್ಲಿ ಮೂರು ವರ್ಷದ ಪಿಜಿ(ಡಿಎನ್ಬಿ) ಕೋರ್ಸ್ಗಳ ಪ್ರಾರಂಭ.
* ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ತಪಾಸಣೆ ಮತ್ತು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಲಸಿಕಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು.
* ರಾಯಚೂರು, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಭದ್ರಾವತಿ, ಕೆಜಿಎಫ್ ಮತ್ತು ಚಿಕ್ಕಮಗಳೂರಿನಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯಗಳನ್ನು ಉನ್ನತೀಕರಿಸಲಾಗುವುದು.







