ʼKarnataka Budget 2026ʼ ವಿಪಕ್ಷ ನಾಯಕರು ಹೇಳಿದ್ದೇನು?

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ, ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.6) ದಾಖಲೆಯ 17ನೇ ಆಯವ್ಯಯ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ 10:15 ಸುಮಾರಿಗೆ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-2027ನೆ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಪ್ರಗತಿಪರ ಬಜೆಟ್ ಅಲ್ಲ : ಬಿ.ವೈ.ವಿಜಯೇಂದ್ರ
‘ಬೆಲೆ ಕುಸಿತದಿಂದ ಕಂಗಾಲಾಗಿರುವ ನಮ್ಮ ಅನ್ನದಾತ ರೈತರಿಗೆ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಕೇವಲ 100 ಕೋಟಿ ರೂ.ನೀಡಿರುವುದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ! ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರತಿ ಬಾರಿಯಂತೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹವ್ಯಾಸವಾಗಿಬಿಟ್ಟಿದೆ. ಇದು ಪ್ರಗತಿಪರ ಬಜೆಟ್ ಅಲ್ಲ, ಇದು ಕರ್ನಾಟಕದ ಪಾಲಿಗೆ ಮತ್ತೊಂದು poಳ್ಳು ಭರವಸೆಯ ಬಜೆಟ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ 3 ವರ್ಷದಿಂದ ರಾಜ್ಯದ ಪ್ರಗತಿ ರಥಕ್ಕೆ ಹಾಕಿರುವ ಬ್ರೇಕ್ ಅನ್ನು ಈ ಬಾರಿಯೂ ತೆಗೆದಿಲ್ಲ ಅನ್ನುವುದೇ ವಾಸ್ತವ’
ಬಜೆಟ್ ಹೂರಣ ಬೃಹತ್ ಶೂನ್ಯ: ಸುನೀಲ್ ಕುಮಾರ್
ಹೊಸ ಪದಪುಂಜಗಳನ್ನು ಹೊಸೆಯುವುದಕ್ಕೆ ನೀಡಿದ ಆದ್ಯತೆಯನ್ನು ಹೊಸ ಯೋಜನೆಗಳ ಸೃಷ್ಟಿಗೆ ನೀಡದೆ ಇರುವುದು ರಾಜ್ಯದ ದೌರ್ಭಾಗ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‍ನ ಒಟ್ಟಾರೆ ಹೂರಣ ‘ಬೃಹತ್ ಶೂನ್ಯ’ ಎಂದು ಬಿಜೆಪಿ ಶಾಸಕ ಎಸ್.ಸುನೀಲ್ ಕುಮಾರ್ ವಿಶ್ಲೇಷಿಸಿದ್ದಾರೆ.
ಈ ಬಾರಿಯ ಬಜೆಟ್ ಅನ್ನು ‘11 ಜಿ’ ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯನವರು ಬಜೆಟ್‍ನ ಪೀಠಿಕೆಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ. ಆದರೆ, ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾಗ ಇದು 11 ಜಿ ಬಜೆಟ್ ಬದಲಾಗಿದೆ ‘11 ಲೈ’ (ಹನ್ನೊಂದು ಸುಳ್ಳು)ಗಳ ಬಜೆಟ್ ಎಂದು ಟೀಕಿಸಿದರು.
ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಾಲದ ಹೊರೆಯನ್ನು ಸಿದ್ದರಾಮಯ್ಯ ಈ ಬಜೆಟ್ ಮೂಲಕ ರಾಜ್ಯದ ಜನತೆಯ ಮೇಲೆ ಹೊರಿಸಿದ್ದಾರೆ. ಬರೋಬ್ಬರಿ 1.32ಲಕ್ಷ ಕೋಟಿ ರೂ.ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ 8.24 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿರುವುದು ಕಳವಳದ ಸಂಗತಿಯಾಗಿದ್ದು, ಬಂಡವಾಳ ವೆಚ್ಚವನ್ನು 74,682 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಯಾವ ದೃಷ್ಠಿಯಿಂದ ನೋಡಿದರೂ ಇದು ವಿತ್ಥೀಯ ಶಿಸ್ತಿನ ಪರಿಮಿತಿಯೊಳಗಿರುವ ಆಯವ್ಯಯ ಎಂದು ಒಪ್ಪಿಕೊಳ್ಳುವುದಕ್ಕೆ ಅಸಾಧ್ಯವಾಗಿದ್ದು, ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅವಲೋಕಿಸಿದರೆ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಸಾಲದ ಸುಳಿಗೆ ನೂಕುವ ಯತ್ನವಷ್ಟೇ ಎಂದು ದೂರಿದರು.
ಆರ್ಥಿಕ ಶಿಸ್ತಿನ ಪಾವಿತ್ರ್ಯ ಹೊಂದಿಲ್ಲ: ಛಲವಾದಿ ನಾರಾಯಣಸ್ವಾಮಿ
‘ರಾಜ್ಯಕ್ಕೆ ಹೆಚ್ಚು ಆದಾಯ ಬರಲಿದೆ ಎಂಬ ನಾಟಕವನ್ನು ಈ ಬಾರಿ ಮಂಡಿಸಿದ ಬಜೆಟ್‍ನಲ್ಲಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಅಂಕಿ-ಅಂಶಗಳಲ್ಲಿ ಆಟ ಆಡಿದ್ದಾರೆ. ಸಾಲದ ಪ್ರಮಾಣದಲ್ಲಿ ಸುಮಾರು 16 ಸಾವಿರ ಕೋಟಿ. ಏರಿಕೆಯಾಗಿದ್ದು, ಈ ಹಣದಲ್ಲಿ ಬಡ್ಡಿ ಪಾವತಿ ಮೊತ್ತ ಕಳೆದ ವರ್ಷಕ್ಕಿಂತ 7ಸಾವಿರ ಕೋಟಿ ರೂ. ಹೆಚ್ಚಾಗಲಿದೆ. ವಿತ್ತೀಯ ಶಿಸ್ತಿನ ನಿಯಮವನ್ನು ಪಾಲಿಸುತ್ತಿದ್ದೇವೆಂಬ ಕಾರಣಕ್ಕೆ ಸಿದ್ದರಾಮಯ್ಯನವರು ಅಂಕಿ-ಸಂಖ್ಯೆ ಬದಲಿಸುವ ಜಾದೂಗಾರನಂತೆ ಈ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ಆರ್ಥಿಕ ಶಿಸ್ತಿನ ಪಾವಿತ್ರ್ಯ ಹೊಂದಿಲ್ಲ’
ಸಾಲದ ಹಣ ಕಾಂಗ್ರೆಸ್ಸಿಗರ ಕಿಸೆಗೆ : ಎಚ್.ಡಿ.ಕುಮಾರಸ್ವಾಮಿ
‘ರಾಜ್ಯ ಸರಕಾರದ್ದು 4.48 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಆಗಿದ್ದು, ಈಗಿನ ಒಟ್ಟು ಸಾಲ 8.24 ಲಕ್ಷ ಕೋಟಿ ರೂ.ಆಗಿದೆ. ಸಾಲ ಕಳೆದ ವರ್ಷದಿಂದ ಈ ವರ್ಷಕ್ಕೆ 1.16 ಲಕ್ಷ ಕೋಟಿ ರೂ.ಗಳಿಂದ 1.32 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಮುಂದಿನ ವರ್ಷಕ್ಕೆ 9 ಲಕ್ಷ ಕೋಟಿ ರೂ.ಮೀರುವುದು ನಿಶ್ಚಿತ. ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ 3 ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು, ಈ ಸರಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ’
ಯಾವುದೇ ಕ್ಷೇತ್ರಕ್ಕೂ ಅನುಕೂಲಕರವಲ್ಲದ ಬಜೆಟ್: ಡಾ.ಅಶ್ವತ್ಥನಾರಾಯಣ್
‘ಈ ಬಜೆಟ್‍ನಲ್ಲಿ ಎಲ್ಲೂ ಭರವಸೆಯೆಂಬುದೇ ಇಲ್ಲ. ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ರೈತ, ದೀನ-ದಲಿತರ ಪರ ಅಲ್ಲ, ಯಾವುದೇ ಕ್ಷೇತ್ರಕ್ಕೂ ಅನುಕೂಲಕರವಲ್ಲದ ಇದೊಂದು ನಿರಾಶೆಯ ಬಜೆಟ್. ಅನುಭವಿ ಸಿದ್ದರಾಮಯ್ಯನವರು ಕೊರತೆ ಬಜೆಟ್ ಮಂಡಿಸಿದ್ದು, ಸಾಲದ ಹೊರೆ ಹೆಚ್ಚಿಸಿದ್ದು, ಇದು ಪ್ರಗತಿಗೆ ಪೂರಕವಲ್ಲದ ಬಜೆಟ್ ಆಗಿದೆ’







