Karnataka Budget 2026 | ಮೀನುಗಾರಿಕೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಲವು ಕ್ರಮಗಳು; ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಹಾಗೂ ಮೀನುಗಾರರ ಜೀವನಮಟ್ಟ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದರು.
ಮೀನುಗಾರಿಕೆ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮೀನುಗಾರರಿಗೆ ಉಚಿತವಾಗಿ ನೀಡಲಾಗುತ್ತಿರುವ ಮೀನುಗಾರಿಕೆ ಸಲಕರಣೆ ಕಿಟ್ ಮೌಲ್ಯವನ್ನು 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಜೈವಿಕ ತಂತ್ರಜ್ಞಾನ ಉದ್ಯಮಗಳು, ನವೀನ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಸಮುದ್ರ ಕೃಷಿ (Mariculture) ಉತ್ತೇಜನಕ್ಕಾಗಿ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ Centre of Excellence ಅನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಮೀನು ಆಹಾರದ ಬಳಕೆಯನ್ನು ಉತ್ತೇಜಿಸುವುದರ ಜೊತೆಗೆ ಸಾರ್ವಜನಿಕರಿಗೆ ಸ್ವಚ್ಛ ಮತ್ತು ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸ್ಯದರ್ಶಿನಿಗಳನ್ನು ಸ್ಥಾಪಿಸಲಾಗುವುದು. ಇದಲ್ಲದೆ ಮೀನು ಮಾರಾಟಕ್ಕೆ ಅಗತ್ಯವಿರುವ ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಗೆ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಜೊತೆಗೆ ಒಳನಾಡು ಮೀನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನದಿ, ಕೆರೆ, ಕೃಷಿ ಹೊಂಡ ಹಾಗೂ ಜಲಾಶಯಗಳಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ ಆಧುನಿಕ ತಂತ್ರಜ್ಞಾನಗಳ ತರಬೇತಿ ನೀಡಲಾಗುವುದು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮೀನುಗಾರರಿಗೆ ಸ್ಥಿರ ಆದಾಯ ಗಳಿಕೆಗೆ ಅವಕಾಶ ಸಿಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.







