Karnataka Budget 2026 | ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಘೋಷಿಸಿರುವ ಕೊಡುಗೆಗಳೇನು?; ಇಲ್ಲಿದೆ ಮಾಹಿತಿ

PC : x/@siddaramaiah
ಬೆಂಗಳೂರು : 2025-26ನೇ ಸಾಲಿನಲ್ಲಿ 117 ಮೌಲಾನಾ ಆಜಾದ್ ಮಾಧ್ಯಮ ಶಾಲೆಗಳು ಹಾಗೂ ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಮಂಡಿಸಿರುವ 2026-27ನೇ ಸಾಲಿನ ಬಜೆಟ್ ನಲ್ಲಿ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಿದರು.
ಅಲ್ಪಸಂಖ್ಯಾತರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಉನ್ನತ ಮಟ್ಟದ ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸಲ 5,000 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಗಾಗಿ ತಲಾ 50,000 ರೂ.ಗಳನ್ನು ನೀಡಲಾಗುವುದು. ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಲ್ಲಿ 150 ಸಂಖ್ಯಾಬಲದ 25 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು. ಹಾಲಿ ಕಾರ್ಯನಿರ್ವಹಿಸುತ್ತಿರುವ 25 ವಿದ್ಯಾರ್ಥಿನಿಲಯಗಳಲ್ಲಿ 50 ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಸಂತ ಶಿಶುನಾಳ ಶರೀಫರವರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳನ್ನು CBSE ಪಠ್ಯಕ್ರಮದಡಿಯಲ್ಲಿ ಪ್ರಾರಂಭಿಸಲಾಗುವುದು. ಇದಕ್ಕೆ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗುವುದು. 2026-27ನೇ ಸಾಲಿನಲ್ಲಿ 25 ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ವಸತಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪೈಕಿ 25 ವಸತಿ ಶಾಲೆಗಳಲ್ಲಿ ಪಿ.ಯು.ಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
18 ಎ.ಪಿ.ಜೆ -ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲಾಗುವುದು. ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು ನಾಲ್ಕು ವಸತಿ ಶಾಲೆಗಳನ್ನು Center of Excellence ಸ್ಥಾಪಿಸಲಾಗುವುದು. ಅಲ್ಲದೇ 20 ವಸತಿ ಶಾಲೆಗಳಲ್ಲಿನ ಮಕ್ಕಳಿಗೆ CET/JEE/NEET ವಿಶೇಷ ತರಬೇತಿ ನೀಡಲಾಗುವುದು ಎಂದು ಘೋಷಿಸಿದರು.
ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ನಿರಂತರ ಕಲಿಕಾ ಅವಕಾಶಗಳನ್ನು ಒದಗಿಸಲು ಮತ್ತು ಜ್ಞಾನವನ್ನು ವೃದ್ಧಿಸಲು ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಬೆಂಗಳೂರಿನಲ್ಲಿ 100 ಸಂಖ್ಯಾಬಲದ ಉದ್ಯೋಗಸ್ಥ ಮಹಿಳೆಯರ ನಾಲ್ಕು ವಸತಿನಿಲಯಗಳನ್ನು ಪ್ರಾರಂಭಿಸಲಾಗುವುದು. ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ 6,000 ರೂ.ಗಳ ಮಾಸಿಕ ಗೌರವಧನವನ್ನು ನೀಡಲಾಗುವುದು. ಅಲ್ಪಸಂಖ್ಯಾತ ಸಮುದಾಯದ ನಿರ್ಗತಿಕ 1100 ಸಂಖ್ಯಾಬಲದ ಎರಡು ಮಹಿಳಾ ವೃದ್ಧಾಶ್ರಮಗಳನ್ನು ಪ್ರಾರಂಭಿಸುವುದಕ್ಕೆ ನೆರವು ನೀಡಲಾಗುವುದು. ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕ ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ ಮೊಬೈಲ್ ಕಿಚನ ಫುಡ್ ಕಿಯೋಸ್ಕ (Kiosk) ಸೌಲಭ್ಯಗಳನ್ನು ನಿಗಮಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ಮೂರು ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಪ್ರೋತ್ಸಾಹ ನೀಡಲು ಅಲ್ಪಸಂಖ್ಯಾತರ ಮಹಿಳಾ ಕೋ-ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
ಹಿರಿಯ ನಾಗರೀಕರಿಗೆ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರೈಸ್ತ ಸಂಸ್ಥೆಗಳು ನಡೆಸುವ 10 ವೃದ್ಧಾಶ್ರಮಗಳಲ್ಲಿ ಸಮಗ್ರ ಜೆರಿಯಾಟ್ರಿಕ್ ಪ್ಯಾಲಿಯೇಟಿವ್ ಕೇರ್ ಘಟಕಗಳನ್ನು ಸ್ಥಾಪಿಸಲು ತಲಾ 50 ಲಕ್ಷ ರೂ.ಗಳಂತೆ ಒಟ್ಟಾರೆ ಐದು ಕೋಟಿ ರೂ. ಒದಗಿಸಲಾಗುವುದು. ಬೆಂಗಳೂರಿನ ಕೆಂಗೇರಿಯಲ್ಲಿ ಆಸಿರ್ವನಂ ಬೆನಿಡಿಕ್ಟಿನ್ ಮೊನಾಸ್ಟರಿಯ ಎರಡು ಎಕರೆ ಜಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲು ಮುಖ್ಯ ಸಂಸ್ಥಾತ್ಮಕ ಮೂಲಸೌಕರ್ಯದ ನಿರ್ಮಾಣಕ್ಕೆ ಐದು ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇತರೆ ಸಮಾಜ ಸುಧಾರಕರ ಪುಸ್ತಕಗಳನ್ನು ಉರ್ದು ಭಾಷೆಯಲ್ಲಿ ಅನುವಾದಿಸಲಾಗುವುದು. ಹಜ್ ಯಾತ್ರಿಕರು ಹಾಗೂ ಅವರ ಸಂಬಂಧಿಕರಿಗೆ ಅಗತ್ಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನಗಳನ್ನು ನಿರ್ಮಾಣ ಮಾಡಲಾಗುವುದು
ವಕ್ಫ್ ಸಂಸ್ಥೆಗಳಲ್ಲಿನ 31 ಮಹಿಳಾ ಪಿ.ಯು ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು. ಮುಂದುವರೆದು, ಸವಣೂರಿನಲ್ಲಿ ಒಂದು ಹೊಸ ಮಹಿಳಾ ಪಿ.ಯು. ಕಾಲೇಜನ್ನು ಪ್ರಾರಂಭಿಸಲಾಗುವುದು ವಾಣಿಜ್ಯ ಉದ್ದೇಶಕ್ಕೆ ಅತಿ ಹೆಚ್ಚು ಬೇಡಿಕೆಯಿರುವ ಪ್ರದೇಶಗಳಲ್ಲಿ ವಕ್ಫ್ ಆಸ್ತಿಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಬೀದರ್ನ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದಲ್ಲಿ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.







