ರಾಜ್ಯ ಬಜೆಟ್ 2025 | 4,848 ಕೋಟಿ ರೂ.ವೆಚ್ಚದಲ್ಲಿ ರಾಜ್ಯ ಹೆದ್ದಾರಿ- ಜಿಲ್ಲಾ ರಸ್ತೆಗಳ ಅಭಿವೃದ್ಧಿ

ಸಾಂದರ್ಭಿಕ ಚಿತ್ರ | PC: Meta AI
ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ 1,850 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಹಾಗೂ 2570 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು 4,848 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಎರಡು ಸೇತುವೆಗಳು, ವಿಜಯಪುರ ಜಿಲ್ಲೆಯ ತಾಳಿಕೋಟೆ ಹತ್ತಿರ ಸೇತುವೆ, ಮೈಸೂರು ಜಿಲ್ಲೆ ಕಬಿನಿ ನದಿಗೆ ಅಡ್ಡಲಾಗಿ ಹಾಗೂ ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆಗಳು, ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನಲ್ಲಿ ದಂಡೋತಿ ಗ್ರಾಮದ ಹತ್ತಿರ ಕಾಗಿನಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ.
► ರಾಜ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ 39 ಸೇತುವೆಗಳನ್ನು ಗುರುತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸದರಿ ಸೇತುವೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕಾಗಿ 1,000 ಕೋಟಿ ರೂ. ಯೋಜನೆಯನ್ನು ರೂಪಿಸಲಾಗುವುದು.
► ಕೊಡಗು ಜಿಲ್ಲೆಯ ವಿರಾಜಪೇಟೆ–ಪೊನ್ನಂಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಹಾನಿ ಒಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗುವುದು.
► 3,190 ಕೋಟಿ ರೂ. ಮೊತ್ತದ ದೇವನಹಳ್ಳಿ–ವಿಜಯಪುರ-ಎಚ್.ಕ್ರಾಸ್–ವೇಮಗಲ್–ಮಾಲೂರು-ತಮಿಳುನಾಡು ಗಡಿಯವರೆಗೆ ಕೈಗಾರಿಕಾ ಸಂಪರ್ಕ ಕಲ್ಪಿಸುವ 123 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಯಡಿ ಪ್ರಸಕ್ತ ಸಾಲಿನಲ್ಲಿ 30 ಕಿ.ಮೀ ರಸ್ತೆಯನ್ನು ಪೂರ್ಣಗೊಳಿಸಲಾಗುವುದು.
► ಎಸ್ಎಚ್ಡಿಪಿ ಹಂತ-5 ರಡಿ 9 ಸಾವಿರ ಕೋಟಿ ರೂ. ಮೊತ್ತದಲ್ಲಿ ಒಟ್ಟು 2,500 ಕಿಮೀ ಉದ್ದದ ‘ಕೋರ್ ರೋಡ್ ನೆಟ್ವರ್ಕ್’ ರಸ್ತೆಗಳ ಅಭಿವೃದ್ಧಿಯನ್ನು ಎರಡು ಘಟ್ಟಗಳಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಘಟ್ಟ-1ರಲ್ಲಿ ಈವರೆಗೆ 150 ಕಿ.ಮೀ ಉದ್ದದ ರಸ್ತೆ ನಿರ್ಮಿಸಿದ್ದು, ಪ್ರಸಕ್ತ ಸಾಲಿನಲ್ಲಿ 1,317 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೊಳಿಸಲಾಗುವುದು.
► ಕೆಶಿಪ್-4 ಯೋಜನೆಯಡಿ 5,736 ಕೋಟಿ ರೂ. ಮೊತ್ತದಲ್ಲಿ ಏಷಿಯನ್ ಡೆವೆಲಪ್ಮೆಂಟ್ ಬ್ಯಾಂಕ್ ನೆರವಿನೊಂದಿಗೆ 875 ಕಿ.ಮೀ ಉದ್ದದ ರಾಜ್ಯದ 11 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.
► ರಾಯಚೂರು ನಗರಕ್ಕೆ ಕೆಕೆಆರ್ಡಿಬಿ ಮ್ಯಾಕ್ರೋ ಅನುದಾನದಡಿ ಹಾಗೂ ಬೈಲಹೊಂಗಲ ಪಟ್ಟಣಕ್ಕೆ ವರ್ತುಲ ರಸ್ತೆಗಳನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲಾಗುವುದು. ಈ ಯೋಜನೆಗಳಿಗೆ ಬೇಕಿರುವ ಜಮೀನನ್ನು ಲ್ಯಾಂಡ್ ಪೂಲಿಂಗ್ ಮಾದರಿಯಲ್ಲಿ ಪಡೆಯಲಾಗುವುದು. ಮುಂದುವರೆದು ವಾಗ್ದಾರಿ-ರಿಬ್ಬನ್ಪಳ್ಳಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಾಗೂ ಮದ್ದೂರು ನಗರದಲ್ಲಿ ರಸ್ತೆಯ ಅಗಲೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲಾಗುವುದು.