ವಾಣಿಜ್ಯ ಮತ್ತು ಕೈಗಾರಿಕೆ: ‘ಧಾರವಾಡ ಕೈಗಾರಿಕಾ ನೋಡ್’ಗೆ ಭೂಸ್ವಾಧೀನಕ್ಕೆ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ಮೀಸಲು

ಬೆಂಗಳೂರು, ಮಾ.6: ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಯಡಿ 30 ಸಾವಿರ ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವುದರೊಂದಿಗೆ 75 ಸಾವಿರ ಉದ್ಯೋಗಾವಕಾಶವನ್ನು ಕಲ್ಪಿಸುವ ಸದುದ್ದೇಶದಿಂದ ‘ಧಾರವಾಡ ಕೈಗಾರಿಕಾ ನೋಡ್’ಗೆ ಸಂಬಂಧಿಸಿದಂತೆ ಸಾವಿರ ಎಕರೆಯನ್ನು ಭೂಸ್ವಾಧೀನ ಮಾಡಲು 600 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಎಂಎಸ್‍ಎಂಇ ಗಳನ್ನು ಪ್ರೋತ್ಸಾಹಿಸಲು ಕೆಎಸ್‍ಎಸ್‍ಐಡಿಸಿ ಮೂಲಕ ವಿವಿಧ ಜಿಲ್ಲೆಗಳಲ್ಲಿ ಎಂಟು ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 10 ಕೈಗಾರಿಕಾ ವಸಾಹತುಗಳಲ್ಲಿ 1,500 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದರು.
ಕರ್ನಾಟಕ ನಿರಪರಾಧೀಕರಣ (ಉಪಬಂಧಗಳ ತಿದ್ದುಪಡಿ) ಅಧಿನಿಯಮ, 2025ನ್ನು ಜಾರಿಗೆ ತರುವ ಮೂಲಕ ರಾಜ್ಯದ ಒಟ್ಟು 13 ಅಧಿನಿಯಮಗಳಡಿಯಲ್ಲಿನ 278 ಅನುಚ್ಛೇದಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ. ಜೀವಿತಾವಧಿ ಮುಗಿದ ವಾಹನಗಳನ್ನು ವಿಲೇವಾರಿ ಮಾಡಲು ಕೆಐಎಡಿಬಿ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಘಟಕವನ್ನು ಸ್ಥಾಪಿಸಲಾಗುವುದು. ‘ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆಗಳ ಪರೀಕ್ಷಾ ಘಟಕ’ ಸ್ಥಾಪಿಸಲು ರಾಜ್ಯ ಸರಕಾರದಿಂದ 100 ಎಕರೆ ಜಮೀನನ್ನು ನೀಡುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಮುಖ್ಯಾಂಶಗಳು:
•ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‍ನಲ್ಲಿ ಏರೋಸ್ಪೇಸ್ ಕಾಮನ್ ಫೆಸಿಲಿಟಿ ಸೆಂಟರ್ ಅನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು, ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳ ಅನುದಾನ ಮೀಸಲು.
•ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್‍ನ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ ಸಂಕೀರ್ಣವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು.
•ಆರ್ಥಿಕ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸುವುದು.
•ಮೈಸೂರು ವಿಮಾನ ನಿಲ್ದಾಣದ ಹತ್ತಿರದಲ್ಲಿ ಏರೋಸ್ಪೇಸ್ ಪಾರ್ಕ್ ಅನ್ನು ಕೆಐಎಡಿಬಿ ವತಿಯಿಂದ ಅಭಿವೃದ್ಧಿಪಡಿಸುವುದು.
•ಟ್ರೀ ಪಾರ್ಕ್ ಯೋಜನೆಯ ಮೊದಲನೆಯ ಹಂತವನ್ನು ಪ್ರಸಕ್ತ ಸಾಲಿನಲ್ಲಿ ಲೋಕಾರ್ಪಣೆ ಮಾಡುವುದು. ಎರಡನೇ ಹಂತದಡಿ ಸಾಂಸ್ಕೃತಿ ಕ ಮತ್ತು ಕ್ರೀಡಾ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳುವುದು.
•ಎಂಎಸ್‍ಎಂಇ ಕೈಗಾರಿಕೆಗಳನ್ನು ಪ್ರೋ ತ್ಸಾಹಿಸಲು, ಉದ್ಯೋಗಾವಕಾಶವನ್ನು ಕಲ್ಪಿಸಲು ಎಂಎಸ್‍ಇ-ಸಿಡಿಪಿ ಯೋಜನೆಯಡಿ 2026-27ನೇ ಸಾಲಿಗೆ 10 ಕ್ಲಸ್ಟರ್ಗಳನ್ನು 15 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.







