ರಾಜ್ಯದಲ್ಲಿ ‘ಪರಮಾಣು ವಿದ್ಯುತ್ ಸ್ಥಾವರ’ ಸ್ಥಾಪನೆಗೆ ಸಂಪುಟ ತಾತ್ವಿಕ ಅನುಮೋದನೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಸಚಿವ ಸಂಪುಟ ಸಭೆ ತಾತ್ವಿಕ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ತಾತ್ವಿಕ ಅನುಮೋದನೆ ಸಿಕ್ಕಿರುವುದರಿಂದ, ಎನ್ಟಿಪಿಸಿ ಸಂಸ್ಥೆಯು ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾಪನೆಗೆ ಗುರುತಿಸಿರುವ ಸಂಭಾವ್ಯ ಸ್ಥಳಗಳಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲು ಅನುಮತಿ ನೀಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಅದೇ ರೀತಿ, ರಾಯಚೂರು ತಾಲೂಕಿನಲ್ಲಿ ನೂತನ ಜವಳಿ ಪಾರ್ಕ್ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಒಟ್ಟು 24.50 ಕೋಟಿ ರೂ.ಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಆಯುಷ್ ಇಲಾಖೆಯ ಆಯುರ್ವೇದ, ಸಿದ್ದ ಮತ್ತು ಯುನಾನಿ ಔಷಧಗಳ ಅಮಲುಜಾರಿ ವಿಭಾಗ ಹಾಗೂ ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜೊತೆಗೆ ವಿಲೀನಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಹಾನಗಲ್ ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ 28.3 ಎಕರೆ ಪ್ರದೇಶದಲ್ಲಿ ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 35.07 ಕೋಟಿ ರೂ.ಗಳ ಮೊತ್ತದಲ್ಲಿ ‘ಫುಡ್ ಪಾರ್ಕ್’ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕನಕಗಿರಿ ತಾಲೂಕಿನ ಸಿರಿವಾರ ಗ್ರಾಮದ ಪರಂಪೋಕದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಡಿ 83.79 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಜತೆಗೆ, ಚಿಕ್ಕಬಳ್ಳಾಪುರದ ಮಂಡಿಕಲ್ಲು ಹೋಬಳಿ ಯರಮಾರೇನಹಳ್ಳಿ ಗ್ರಾಮದಲ್ಲಿ 5.23 ಎಕರೆ ಭೂಮಿ ಅಕ್ಷಯ ಪಾತ್ರೆ ಅಡುಗೆ ಮನೆ ಮತ್ತು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಇಸ್ಕಾನ್ಗೆ ಮಂಜೂರು ಮಾಡಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವತಿಯಿಂದ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಲಾಗಿರುವ ಸಮರ್ಪಕವಾಗಿ ಕಾರ್ಯ ನಿರ್ವಹಿಸದ 1,530 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳ ಉಪಕರಣಗಳನ್ನು 19.89 ಕೋಟಿ ರೂ. ಅಂದಾಜು ಮೊತ್ತದಲ್ಲಿ ಬದಲಿಸಿ ಹೊಸದಾಗಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಪೀಠವನ್ನು 10 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದ ಅವರು, ಉತ್ತರ ಕರ್ನಾಟಕ ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 166.22 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಎ ಮತ್ತು ಬಿ ಖಾತಾ ನೀಡುವುದನ್ನು ನಿಯಂತ್ರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ, ಅಂತರ್ಜಲ ಬಳಕೆಗೆ ನಿರಾಕ್ಷೇಪಣಾ ನೀಡುವ ಸಂಬಂಧ ಕೇಂದ್ರಿಯ ಅಂತರ್ಜಲ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ ರಾಜ್ಯದಲ್ಲಿ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಉಲ್ಲೇಖಿಸಿದರು.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಪಟ್ಟಣದ ರಸ್ತೆಯನ್ನು 60 ಕೋಟಿ ರೂ. ಮೊತ್ತದಲ್ಲಿ ಅಗಲೀಕರಣ ಮಾಡುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಯಲಬುರ್ಗಾ ತಾಲೂಕು ಪ್ರಜಾಸೌಧ ಕಟ್ಟಡ ಕಾಮಗಾರಿಗೆ 16 ಕೋಟಿ ರೂ.ಅನುಮೋದನೆ, ಕೋಲಾರ ಜಿಲ್ಲೆಯ ಏತ ನೀರಾವರಿ ಯೋಜನೆಯ ಕಾಮಗಾರಿಯ 5 ವರ್ಷಗಳ ಪೋಷಣೆ ಮತ್ತು ನಿರ್ವಹಣೆ ಕಾಮಗಾರಿಗೆ 128 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಕಿತ್ತೂರು ಕೋಟೆ ಆವರಣದಲ್ಲಿ 30 ಕೋಟಿ ರೂ. ವೆಚ್ಚದ ಥೀಮ್ ಪಾರ್ಕ್ ನಿರ್ಮಾಣ ಹಾಗೂ ಕುಶಾಲನಗರದ ಹುಲುಗುಂದ ಗ್ರಾಮದ ಬಳಿ ಕಮಾನು ಸೇತುವೆಯನ್ನು 36.50 ಕೋಟಿ ರೂ.ಮೊತ್ತದಲ್ಲಿ ನಿರ್ಮಿಸಲು, ಹೇಮಾವತಿ ಯೋಜನೆಯಡಿಯಲ್ಲಿನ ನಾಗಮಂಗಲ ಶಾಖಾ ನಾಲೆಯ ಸರಪಳಿ ಅಭಿವೃದ್ಧಿಪಡಿಸುವ 560 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.







