ಮುಸ್ಲಿಮರು ಸಾಮಾಜಿಕವಾಗಿ ಉತ್ತಮ ಮಟ್ಟದಲ್ಲಿದ್ದಾರೆ, ಆದರೆ ಜೀವನೋಪಾಯದಲ್ಲಿ ಕಳಪೆ: ಕರ್ನಾಟಕ ಜಾತಿ ಗಣತಿ ವರದಿ

File Photo | PTI
ಬೆಂಗಳೂರು: ಕರ್ನಾಟಕದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮರ ಮೀಸಲಾತಿಯನ್ನು ಶೇ.4ರಿಂದ ಶೇ.8ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿರುವ ರಾಜ್ಯದ ಜಾತಿಗಣತಿ ವರದಿಯ ಪ್ರಕಾರ, ಮುಸ್ಲಿಮರು ಜೈನರಿಗೆ ಸಮಾನವಾದ ಉತ್ತಮ ಸಾಮಾಜಿಕ ಸ್ಥಾನಮಾನವನ್ನು ಹೊಂದಿದ್ದಾರೆ, ಆದರೆ ಜೀವನೋಪಾಯದ ವಿಷಯದಲ್ಲಿ ಅವರು ಅತ್ಯಂತ ಹಿಂದುಳಿದಿದ್ದಾರೆ ಎಂದು deccanherald.com ವರದಿ ಮಾಡಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿಯು ಮುಸ್ಲಿಮರಿಗೆ 200ರಲ್ಲಿ 89.25ರಷ್ಟು ಹಿಂದುಳಿದಿರುವಿಕೆ ಅಂಕಗಳನ್ನು ನೀಡಿದೆ. ಮುಸ್ಲಿಮರು ಯಾದವ (ಗೊಲ್ಲ) ಸಮುದಾಯ (93.20 ಅಂಕ)ಕ್ಕಿಂತ ಮೇಲಿನ ಸ್ಥಾನದಲ್ಲಿದ್ದಾರೆ.
ಅಂಕಗಳು ಹೆಚ್ಚಾದಷ್ಟೂ ಆ ಸಮುದಾಯದ ಹಿಂದುಳಿದಿರುವಿಕೆಯೂ ಹೆಚ್ಚಾಗಿರುತ್ತದೆ.
ಸಾಮಾಜಿಕವಾಗಿ ಮುಸ್ಲಿಮರ ಅಂಕಗಳು 100ರಲ್ಲಿ 19.71 ಆಗಿದ್ದು, ಇದು ಜೈನ ಸಮುದಾಯದ 19.73ಕ್ಕೆ ಸಮೀಪವಿದೆ.
ಆದರೆ ಶಿಕ್ಷಣದ ವಿಷಯದಲ್ಲಿ ಮುಸ್ಲಿಮರು ಹಿಂದುಳಿದಿದ್ದಾರೆ (68ರಲ್ಲಿ 42.60 ಅಂಕಗಳು). ಮುಸ್ಲಿಮರ ಜೀವನೋಪಾಯ ಅಂಕಗಳು 32ರಲ್ಲಿ 26.94ರಷ್ಟು ಅಧಿಕವಾಗಿದ್ದು, ಇದು ಅಂಚಿನಲ್ಲಿರುವ ಎಲ್ಲ ಗುಂಪುಗಳ ಪೈಕಿ ಅವರನ್ನು ಈ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದವರನ್ನಾಗಿ ಮಾಡಿದೆ. ಜೀವನೋಪಾಯ ಸೂಚಕಗಳಲ್ಲಿ ಭೂ ಹಿಡುವಳಿ, ಉದ್ಯೋಗದ ಸ್ವರೂಪ, ನಿರುದ್ಯೋಗ ಇತ್ಯಾದಿಗಳು ಸೇರಿವೆ.
ಜೈನರು ಮತ್ತು ಕ್ರೈಸ್ತರು ಅನುಕ್ರಮವಾಗಿ ಒಟ್ಟು 34.99 ಮತ್ತು 24.68 ಅಂಕಗಳೊಂದಿಗೆ ಕರ್ನಾಟಕದ ಅತ್ಯಂತ ಮುಂದುವರಿದ ಸಮುದಾಯಗಳಲ್ಲಿ ಸೇರಿದ್ದಾರೆ. ವಾಸ್ತವದಲ್ಲಿ ಕ್ರೈಸ್ತರು ಬ್ರಾಹ್ಮಣರ ನಂತರ ಎರಡನೇ ಅತ್ಯಂತ ಮುಂದುವರಿದ ಸಮುದಾಯವಾಗಿದ್ದಾರೆ.
ರಾಜಕೀಯವಾಗಿ ಮುಸ್ಲಿಮರ ಹಿಂದುಳಿದಿರುವಿಕೆ ಅಂಕವು ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ ಎಂಬ ಬಿಜೆಪಿಯ ವಾದದ ನಡುವೆಯೂ ಮುಸ್ಲಿಮರ ಮೀಸಲಾತಿಯಲ್ಲಿ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೆರವಾಗಲಿದೆ. ಮುಸ್ಲಿಮರು ಪ್ರಸ್ತುತ ಶೇ.4ರಷ್ಟು ಕೋಟಾದೊಂದಿಗೆ ವಿಶೇಷ ವರ್ಗ 2ಬಿ ಅಡಿ ಬರುತ್ತಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಾಲಿ ಕಾಂಗ್ರೆಸ್ ಶಾಸಕ(ನರಸಿಂಹರಾಜ) ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಅವರು,‘ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಮತ್ತು ಆರ್ಥಿಕ ಮಟ್ಟಗಳು ಎಸ್ಸಿ/ಎಸ್ಟಿಗಿಂತ ತೀರ ಕೆಳಮಟ್ಟದಲ್ಲಿವೆ ಎಂದು ಸಾಚಾರ್ ಸಮಿತಿ ವರದಿಯು ಸ್ಪಷ್ಟವಾಗಿ ಸೂಚಿಸಿದೆ. ಎಸ್ಸಿ/ಎಸ್ಟಿ ಮತ್ತು ಒಬಿಸಿಗಳಿಗಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮಗಳನ್ನು ನಾವು ಬಯಸುವುದಿಲ್ಲ. ನಾವು ಶಿಕ್ಷಣ, ಆರೊಗ್ಯ,ವಸತಿ ಮತ್ತು ಉದ್ಯೋಗ ವಿಷಯಗಳಲ್ಲಿ ಬೆಂಬಲವನ್ನಷ್ಟೇ ಬಯಸುತ್ತೇವೆ’ಎಂದು ಹೇಳಿದರು.
2015ರ ಸಮೀಕ್ಷೆ ಸಂದರ್ಭದಲ್ಲಿ ಒಟ್ಟು 59.51 ಲಕ್ಷ ಜನರು ತಮ್ಮನ್ನು ‘ಮುಸ್ಲಿಮ್’ ಎಂದಷ್ಟೇ ಗುರುತಿಸಿಕೊಂಡಿದ್ದಾರೆ. ಈ ಪೈಕಿ ಶೇ.11.7ರಷ್ಟು ತಾವು 10ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದೇವೆ ಎಂದು ಹೇಳಿದ್ದರೆ, ಕೇವಲ ಶೇ.5.5ರಷ್ಟು ಜನರು ತಾವು ಕಾಲೇಜು ಅಥವಾ ವಿವಿಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಕೇವಲ ಶೇ.1.03ರಷ್ಟು ಜನರು ಸರಕಾರಿ ಉದ್ಯೋಗ ಹೊಂದಿದ್ದು, ಶೇ.1.39ರಷ್ಟು ಜನರು ಖಾಸಗಿ ರಂಗದಲ್ಲಿ ದುಡಿಯುತ್ತಿದ್ದಾರೆ. ಅನೇಕರು ಕುಟುಂಬದ ಉದ್ಯೋಗಗಳು ಅಥವಾ ವ್ಯವಹಾರಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.
‘ಒಂದು ಪಂಗಡವಾಗಿ ನಮಗೆ ಒಂದೇ ವೃತ್ತಿಯಿಲ್ಲ. ಪ್ರವಾದಿಯವರು ಜಾನುವಾರುಗಳನ್ನು ಮೇಯಿಸುತ್ತಿದ್ದರು, ಅದನ್ನು ಕುರುಬರು ತಮ್ಮ ವೃತ್ತಿಯನ್ನಾಗಿಸಿಕೊಂಡರು’ ಎಂದು ಹೇಳಿದ ಸೇಠ್, ‘ಅದು ಪಂಕ್ಚರ್ ರಿಪೇರಿ, ಗುಜರಿ ವ್ಯಾಪಾರ ಅಥವಾ ನಾವು ಮಾಡುತ್ತಿರುವ ಬೇರೆ ಯಾವುದೇ ಕೆಲಸವಾಗಿರಲಿ, ಅವುಗಳಿಗೂ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು.
90 ಅಥವಾ ಹೆಚ್ಚಿನ ಅಂಕಗಳನ್ನು ಹೊಂದಿರುವ ಜಾತಿಗಳು ಅಥವಾ ಸಮುದಾಯಗಳನ್ನು ‘ಅತ್ಯಂತ ಹಿಂದುಳಿದವರು’ ಎಂದು ಹೇಳಿರುವ ಆಯೋಗವು, ಅವುಗಳನ್ನು 1ಎ ಮತ್ತು 1ಬಿ ವರ್ಗಗಳಲ್ಲಿ ಸೇರಿಸಲಾಗುತ್ತದೆ. 50ರಿಂದ 89 ಅಂಕ ಹೊಂದಿರುವವರು ‘ಹೆಚ್ಚು ಹಿಂದುಳಿದವರು’ ಆಗಿದ್ದು ಅಂತಹ ಸಮುದಾಯಗಳು 2ಎ ಮತ್ತು 2ಬಿ ಹಾಗೂ 20ರಿಂದ 49 ಅಂಕಗಳನ್ನು ಹೊಂದಿರುವ ಜಾತಿಗಳು ಮತ್ತು ಸಮುದಾಯಗಳು ‘ಹಿಂದುಳಿದವರಾಗಿದ್ದು’ 3ಎ ಮತ್ತು 3ಬಿ ವರ್ಗಗಳಿಗೆ ಸೇರುತ್ತವೆ ಎಂದು ತಿಳಿಸಿದೆ.







