SIR | ಸಾರ್ವಜನಿಕರ ಒತ್ತಾಯದ ಬಳಿಕ 43.81 ಲಕ್ಷ ನೋಟಿಸ್ ಪಟ್ಟಿ ಪ್ರಕಟಿಸಿದ ಕರ್ನಾಟಕ ಸಿಇಒ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್ ನೀಡಲು ಗುರುತಿಸಿರುವ ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ಅನ್ಮ್ಯಾಪಡ್ ವರ್ಗದಲ್ಲಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ಪ್ರಕಟಿಸಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ನೋಟಿಸ್ ಪಡೆಯುತ್ತಿರುವ ಮತದಾರರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂಬ ಒತ್ತಾಯಗಳು ಹಾಗೂ ವಿವಿಧ ವಲಯಗಳಿಂದ ವ್ಯಕ್ತವಾಗುತ್ತಿದ್ದ ಆಕ್ಷೇಪಗಳ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ ತಮ್ಮ ಹೆಸರು ಯಾವ ಕಾರಣಕ್ಕಾಗಿ ಪರಿಶೀಲನೆಗೆ ಒಳಪಟ್ಟಿದೆ, ತಮಗೆ ನೋಟಿಸ್ ನೀಡಲಾಗಿದೆಯೇ ಹಾಗೂ ಮುಂದಿನ ಪ್ರಕ್ರಿಯೆ ಏನು ಎಂಬುದನ್ನು ತಿಳಿದುಕೊಳ್ಳಲು ಮತದಾರರಿಗೆ ನೋಟಿಸ್ ಪಟ್ಟಿಯ ಸಾರ್ವಜನಿಕ ಪ್ರಕಟಣೆ ನೆರವಾಗಲಿದೆ.
ಈ ಹಿಂದೆ ಎಸ್ಐಆರ್ ಪ್ರಕ್ರಿಯೆಯಲ್ಲಿ ‘ಎಎಸ್ಡಿಡಿಒ, ತಾರ್ಕಿಕ ವ್ಯತ್ಯಾಸ ಮತ್ತು ಅನ್ಮ್ಯಾಪ್ಡ್ ಸೇರಿದಂತೆ ವಿವಿಧ ವರ್ಗಗಳಲ್ಲಿ ಗುರುತಿಸಲ್ಪಟ್ಟ ಮತದಾರರ ಕುರಿತು ಸ್ಪಷ್ಟತೆ ನೀಡಬೇಕೆಂಬ ಆಗ್ರಹಗಳು ಕೇಳಿಬಂದಿದ್ದವು. ನೋಟಿಸ್ ವಿತರಣೆ ಪ್ರಕ್ರಿಯೆಯಲ್ಲೂ ಹಲವು ಕಡೆ ಗೊಂದಲ ಮತ್ತು ವಿಳಂಬದ ಬಗ್ಗೆ ದೂರುಗಳು ಕೇಳಿಬಂದಿದ್ದವು.
ನೋಟಿಸ್ ಪಟ್ಟಿ ಸಾರ್ವಜನಿಕವಾಗಿರುವುದರಿಂದ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ಅಗತ್ಯವಿದ್ದಲ್ಲಿ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಅವಕಾಶ ದೊರೆಯಲಿದೆ.
ನೋಟಿಸ್ ಕುರಿತ ಮಾಹಿತಿಗಾಗಿ https://ceo.karnataka.gov.in/notices_issued.html ವೆಬ್ ಲಿಂಕ್ ಪರೀಕ್ಷಿಸಬಹುದು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ತಪ್ಪಾಗಿ ಕೈಬಿಡದಂತೆ ಪಾರದರ್ಶಕತೆ ಮತ್ತು ಸಮರ್ಪಕ ಅವಕಾಶ ಕಲ್ಪಿಸುವುದು ಅತ್ಯಂತ ಮುಖ್ಯವಾಗಿದೆ. ನೋಟಿಸ್ ಪಡೆಯಲಿರುವ ಮತದಾರರು ದಾಖಲೆಗಳನ್ನು ಸಲ್ಲಿಸಲು ಹಾಗೂ ತಮ್ಮ ಹಕ್ಕು-ಆಕ್ಷೇಪಣೆಗಳನ್ನು ಸಲ್ಲಿಸಲು ಅವಧಿ ವಿಸ್ತರಣೆ ಮಾಡಬೇಕೆಂಬ ನಾಗರಿಕರ ಆಗ್ರಹವೂ ಮುಂದುವರಿದಿದೆ.
ನೋಟಿಸ್ ಪಟ್ಟಿಯನ್ನು ಸಾರ್ವಜನಿಕಗೊಳಿಸಿರುವುದು ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಆದರೆ ಪಟ್ಟಿಯಲ್ಲಿರುವ ಮತದಾರರಿಗೆ ನೋಟಿಸ್ ವಿತರಣೆ, ಅವರ ಆಕ್ಷೇಪಣೆಗಳ ಸ್ವೀಕಾರ ಹಾಗೂ ಅಂತಿಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸುವ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಹೇಗೆ ನಡೆಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ನೋಟಿಸ್ ಪಡೆದ ಮತದಾರರೇ ಹಾಜರಾಗಬೇಕು:
ನೋಟಿಸ್ ಪಡೆದ ವ್ಯಕ್ತಿಯೇ ಇಆರ್ಒ/ಎಇಆರ್ಒ ಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂಬುದು ಮತದಾರರಿಗೆ ಮತ್ತೊಂದು ಪ್ರಮುಖ ಅಡಚಣೆಯಾಗಿದೆ. ಬೇರೆ ಯಾರಿಗೂ ಅವರ ಪರವಾಗಿ ವಿಚಾರಣೆಯ ಸ್ಥಳದಲ್ಲಿ ಹಾಜರಾಗಿ ಪ್ರತಿನಿಧಿಸಲು ಅವಕಾಶವಿಲ್ಲ.






