ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಕ್ಕೆ ದಾಖಲೆ ನೀಡಿ; ರಾಹುಲ್ ಗಾಂಧಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯಿಂದ ನೋಟಿಸ್

ರಾಹುಲ್ ಗಾಂಧಿ (Photo: PTI)
ಬೆಂಗಳೂರು : ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಯಾವ ಆಧಾರದಲ್ಲಿ ಆರೋಪಿಸಿದ್ದೀರೊ, ಆ ದಾಖಲೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ರವಿವಾರ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಲೋಕಸಭಾ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿಗೆ ನೋಟಿಸ್ ಜಾರಿಗೊಳಿಸಿದ ಬೆನ್ನಿಗೇ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿ, ಇಲ್ಲವೇ ಅಸಂಬದ್ಧ ಆರೋಪಗಳನ್ನು ಮಾಡುತ್ತಿರುವುದಕ್ಕೆ ದೇಶದ ಕ್ಷಮೆ ಯಾಚಿಸಿ ಎಂದು ಚುನಾವಣಾ ಆಯೋಗ ಮತ್ತೊಮ್ಮೆ ಆಗ್ರಹಿಸಿದೆ.
ʼನೀವು ಒದಗಿಸುವ ದಾಖಲೆಗಳು ನಮ್ಮ ಕಚೇರಿಯಲ್ಲಿ ವಿಸ್ತೃತ ತನಿಖೆ ನಡೆಸಲು ನೆರವು ನೀಡುತ್ತವೆʼ ಎಂದು ರಾಹುಲ್ ಗಾಂಧಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನವಿ ಮಾಡಿದ್ದಾರೆ. ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ದಾಖಲೆಗಳನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದರು.
"ಚುನಾವಣಾಧಿಕಾರಿ ಒದಗಿಸಿರುವ ದಾಖಲೆಗಳ ಪ್ರಕಾರ, ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಆರೋಪಿಸಿದ್ದೀರಿ. ಆದರೆ, ನೀವು ಆರೋಪಿಸಿದಂತೆ ನಾನು ಎರಡು ಬಾರಿ ಮತ ಚಲಾಯಿಸಿಲ್ಲ, ಒಂದೇ ಬಾರಿ ಚಲಾಯಿಸಿರುವುದು ಎಂದು ಶಕುನ್ ರಾಣಿ ಹೇಳಿಕೆ ನೀಡಿದ್ದಾರೆ" ಎಂದು ಈ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರದರ್ಶಿಸಿದ ಗುರುತು ಮಾಡಿದ ದಾಖಲೆಯನ್ನು ಚುನಾವಣಾಧಿಕಾರಿ ವಿತರಿಸಿಲ್ಲ ಎಂಬುದೂ ಮುಖ್ಯ ಚುನಾವಣಾಧಿಕಾರಿ ಕಚೇರಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದೂ ಈ ನೊಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
"ಹೀಗಾಗಿ, ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಯಾವ ದಾಖಲೆಗಳನ್ನು ಆಧರಿಸಿ ಆರೋಪ ಮಾಡಿದ್ದೀರೊ, ಆ ಸೂಕ್ತ ದಾಖಲೆಗಳನ್ನು ನಮಗೆ ದಯವಿಟ್ಟು ಒದಗಿಸಿ. ಇದರಿಂದ ವಿಸ್ತೃತ ತನಿಖೆ ನಡೆಸಲು ಸಾಧ್ಯವಾಗಲಿದೆ" ಎಂದು ಈ ನೋಟಿಸ್ನಲ್ಲಿ ಮನವಿ ಮಾಡಲಾಗಿದೆ.







