ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಸಿಎಂ ಸಿದ್ದರಾಮಯ್ಯ
ರಾಜ್ಯದ ವಿಧೇಯಕಗಳಿಗೆ ಅನುಮೋದನೆ ನೀಡುವಂತೆ ಮನವಿ

Photo: X/@CMofKarnataka
ಹೊಸದಿಲ್ಲಿ: ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ಅನುಮೋದನೆಗೆ ಬಾಕಿಯಿರುವ ಏಳು ವಿಧೇಯಕಗಳಿಗೆ ಅಂಕಿತ ಹಾಕುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಸಲ್ಲಿಸಿದರು.
ವಿಧೇಯಕಗಳು: 2015ನೆ ಸಾಲಿನ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ)ವಿಧೇಯಕ, 2024ನೆ ಸಾಲಿನ ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ)ತೆರಿಗೆ ವಿಧೇಯಕ, 2024ನೆ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ)ವಿಧೇಯಕ, 2025ನೆ ಸಾಲಿನ ನೋಟರಿಗಳು (ಕರ್ನಾಟಕ ತಿದ್ದುಪಡಿ) ವಿಧೇಯಕ, 5. 2025ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ.
2025ನೆ ಸಾಲಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ ಹಾಗೂ 2024ನೆ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ (ತಿದ್ದುಪಡಿ) ಕಾಯ್ದೆಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
‘ರಾಜ್ಯದ 7 ವಿಧೇಯಕಗಳಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದುದರಿಂದ, ರಾಷ್ಟ್ರಪತಿಯನ್ನು ಭೇಟಿ ಮಾಡಿ ಆದಷ್ಟು ಬೇಗ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ವಿಧೇಯಕಗಳು ಸದ್ಯ ನನ್ನ ಬಳಿ ಇಲ್ಲ. ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿರುವುದಾಗಿ ರಾಷ್ಟ್ರಪತಿ ಮಾಹಿತಿ ನೀಡಿದರು. ಅವುಗಳನ್ನು ತರಿಸಿಕೊಂಡು ಅನುಮೋದನೆ ಕೊಡಿ ಎಂದು ಕೋರಿದ್ದೇವೆ. ಅಲ್ಲದೇ, ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ 14 ಹಾಗೂ 15ನೆ ಹಣಕಾಸು ಆಯೋಗದಲ್ಲಿ ಸುಮಾರು 80 ಸಾವಿರ ಕೋಟಿ ರೂ.ನಷ್ಟವಾಗಿದೆ. 16ನೆ ಹಣಕಾಸು ಆಯೋಗದಲ್ಲಿ ನಮಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದೇನೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಮುಖ್ಯಮಂತ್ರಿ @siddaramaiah ಅವರು ಅವರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಅನುಮೋದನೆಗೆ ಬಾಕಿ ಇರುವ ವಿಧೇಯಕಗಳ ಬಗ್ಗೆ ಸಮಾಲೋಚನೆ ನಡೆಸಿದರು.
— CM of Karnataka (@CMofKarnataka) June 24, 2025
ಈ ವೇಳೆ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ಮೈಸೂರು ಪೇಟ ಹಾಗೂ ಶ್ರೀಗಂಧದ ಸ್ಮರಣಿಕೆ ನೀಡಿ ಗೌರವಿಸಿದರು.… pic.twitter.com/5Lev8PlLrt