ಸರಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ಬಳಕೆ ನಿಷೇಧಿಸಿ ರಾಜ್ಯ ಸರಕಾರ ಆದೇಶ

ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ಸರಕಾರಿ ಕಚೇರಿ, ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ಬಳಕೆ ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬುಧವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಉಪ ಕಾರ್ಯದರ್ಶಿ ಕೆ.ರವೀಂದ್ರ ಸುತ್ತೋಲೆ ಹೊರಡಿಸಿದ್ದು, ಸರಕಾರ ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಿಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಸಚಿವಾಲಯ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಸರಕಾರಿ ಕಚೇರಿ, ಸರಕಾರಿ ಸ್ವಾಮ್ಯದ ಮಂಡಳಿ-ನಿಗಮ, ವಿಶ್ವ ವಿದ್ಯಾಲಯಗಳು, ಅನುದಾನಿತ ಸಂಸ್ಥೆಗಳು ಏರ್ಪಡಿಸುವ ಸಭೆ, ಸಮಾರಂಭಗಳಲ್ಲಿ ಒಂದು ಬಾರಿ ಬಳಕೆಯ (ಏಕಬಳಕೆ) ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಲಾಗಿದೆ.
ಇಂತಹ ಸಭೆ, ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಸ್ಟೀಲ್ ಅಥವಾ ಪೇಪರ್ ಗ್ಲಾಸ್ಗಳು ಸೇರಿದಂತೆ ಲೋಟಗಳಲ್ಲಿ ಸರಬರಾಜು ಮಾಡಬೇಕು. ಈ ಹಿಂದೆ ಸರಕಾರಿ ಆದೇಶ ಹೊರಡಿಸಿದ್ದರೂ ಅದನ್ನು ಸಂಬಂಧಿಪಟ್ಟವರು ಪಾಲನೆ ಮಾಡುತ್ತಿಲ್ಲ. ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ಬದಲಿಗೆ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.