ಋತುಚಕ್ರದ ರಜೆ ಕುರಿತು ಕಾನೂನು ರೂಪಿಸಲು ಚಿಂತನೆ; ಹೈಕೋರ್ಟ್ಗೆ ರಾಜ್ಯ ಸರ್ಕಾರದ ಮಾಹಿತಿ

Photo credit: PTI
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾಸಿಕ ಒಂದು ದಿನದ ವೇತನಸಹಿತ ಋತುಚಕ್ರದ ರಜೆ ನೀಡುವ ಸಂಬಂಧ ಕಾನೂನು ಜಾರಿಗೆ ತರಲು ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಈ ವಿಷಯದಲ್ಲಿ ಶಾಸನಾತ್ಮಕ ಕೊರತೆ (Legislative Vacuum) ಇದೆ. ಋತುಚಕ್ರದ ರಜೆಯ ಸಮಸ್ಯೆ ಪರಿಹರಿಸಲು ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರಲ್ಲದೆ, ಪ್ರಕರಣವನ್ನು ಬೇಸಿಗೆ ರಜೆಯ ನಂತರ ವಿಚಾರಣೆಗೆ ನಿಗದಿಪಡಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನು ಆಲಿಸಿದ ನ್ಯಾಯಪೀಠ, ಅಡ್ವೊಕೇಟ್ ಜನರಲ್ ಅವರ ಹೇಳಿಕೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಮೌಖಿಕವಾಗಿ ನುಡಿಯಿತು. ಜತೆಗೆ, ಸರ್ಕಾರ ಇಂತಹ ಕಾನೂನನ್ನು ತರಲು ಚಿಂತಿಸುತ್ತಿದೆ ಎಂಬ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಬೇಕೇ ಎಂದು ಪ್ರಶ್ನಿಸಿತು. ಇದಕ್ಕೆ ಅಡ್ವೊಕೇಟ್ ಜನರಲ್ ಅವರು ಸಮ್ಮತಿಸಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಋತುಚಕ್ರದ ರಜೆಯನ್ನು ನಿಯಂತ್ರಿಸುವ ಕಾನೂನನ್ನು ಪರಿಚಯಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ. ಇಂದು ರಜೆಯ ಪೂರ್ವದ ಕೊನೆಯ ದಿನವಾಗಿದ್ದು, ಪ್ರಕರಣದ ವಿಚಾರಣೆಯು ಗಣನೀಯವಾಗಿ ನಡೆದಿದೆ. ಅದಾಗ್ಯೂ, ಸರ್ಕಾರವು ಕಾನೂನು ರೂಪಿಸಲು ಚಿಂತಿಸುತ್ತಿದೆ ಎಂದು ತಿಳಿಸಿರುವುದರಿಂದ ಪ್ರಕರಣವನ್ನು ರಜೆಯ ನಂತರಕ್ಕೆ ಮುಂದೂಡಲಾಗಿದೆ ಎಂದು ಆದೇಶಿಸಿತು.
ಮುಂದುವರಿದು, ಈ ಮಧ್ಯೆ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಬೇಕಾಗುವಂತಹ ಯಾವುದೇ ಬೆಳವಣಿಗೆಗಳು ಸಂಭವಿಸಿದಲ್ಲಿ, ಅವರು ರಜಾ ಕಾಲದ ಪೀಠವನ್ನು ಸಂಪರ್ಕಿಸಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.






