ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು, ಶೀತದ ಸಿರಪ್ ನೀಡಬೇಡಿ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ಗಳನ್ನು ನೀಡಬಾರದು. 2ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ವೈದ್ಯಕೀಯ ಪರೀಕ್ಷೆಯ ನಂತರ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿಗಳನ್ನು ನೀಡುವುದು ಎಂದು ರಾಜ್ಯ ಸರಕಾರವು ಸಲಹೆ ನೀಡಿದೆ.
ಸೋಮವಾರದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಹಿರಿಯ ಮಕ್ಕಳಲ್ಲಿ ಕೆಮ್ಮಿನ ಸಿರಪ್ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಅನ್ನು ಬಳಸಬೇಕು. ಬಹು ಔಷಧಿಗಳ ಸಂಯೋಜನೆ ಇರುವ ಸಿರಪ್ಗಳನ್ನು ಉಪಯೋಗಿಸಬಾರದು ಎಂದು ಹೇಳಿದೆ.
ಮಕ್ಕಳಲ್ಲಿ ಕೆಮ್ಮು ಮತ್ತು ಶೀತವು ಸೌಮ್ಯವಾಗಿರುತ್ತದೆ. ಹೀಗಾಗಿ ಸುರಕ್ಷಿತವಾದ ಕ್ರಮಗಳಿಂದ ನಿಧಾನವಾಗಿ ಉತ್ತಮಗೊಳ್ಳುತ್ತದೆ. ಪೋಷಕರು ಮಕ್ಕಳಿಗೆ, ಸಾಕಷ್ಟು ದ್ರವಪದಾರ್ಥಗಳನ್ನು ನೀಡಬೇಕು. ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡಲು ಅವಕಾಶ ನೀಡಬೇಕು. ಪೌಷ್ಟಿಕ ಆಹಾರವನ್ನು ನೀಡಬೇಕು ಎಂದು ತಿಳಿಸಿದೆ.
ಸ್ವಯಂ ಔಷಧೋಪಚಾರ ಮಾಡಬಾರದು. ವೈದ್ಯರ ಪ್ರಿಸ್ಕ್ರಿಪ್ಟನ್ ಇಲ್ಲದೆ ಕೆಮ್ಮಿನ ಸಿರಪ್ಗಳನ್ನು ಎಂದಿಗೂ ಖರೀದಿಸಬಾರದು. ಈ ಹಿಂದೆ ಬಳಸಿ ಉಳಿದ ಔಷಧಿಗಳನ್ನು ಅಥವಾ ಇತರರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ತೊಂದರೆ ಇದ್ದರೆ, ತಕ್ಷಣ ಹತ್ತಿರದ ವೈದ್ಯರಿಗೆ ವರದಿ ಮಾಡಬೇಕು ಎಂದು ಸಲಹೆ ನೀಡಿದೆ.
ಮಕ್ಕಳಲ್ಲಿ ಉಸಿರಾಟದ ತೊಂದರೆ ಅಥವಾ ವೇಗವಾಗಿ ಉಸಿರಾಟ, ನಿರಂತರ ಅಥವಾ ಉಲ್ಬಣಗೊಳ್ಳುತ್ತಿರುವ ಕೆಮ್ಮು, ಅತಿಯಾದ ಜ್ವರ ಅಥವಾ ಆಹಾರ ತಿರಸ್ಕರಿಸುವುದು, ನಿದ್ರಾವಸ್ಥೆ ಅಥವಾ ಅಸಹಜ ಪ್ರತಿಕ್ರಿಯೆ ಇದ್ದರೆ, ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ, ಔಷಧಿಗಳ ತರ್ಕಬದ್ದ ಬಳಕೆಯನ್ನು ಉತ್ತೇಜಿಸಬೇಕು. ಕೆಮ್ಮು ಸಿರಪ್ಗಳ ಅನುಚಿತ ಬಳಕೆಯಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಬೇಕು ಎಂದು ತಿಳಿಸಿದೆ.
ಕೆಮ್ಮು ಸಿರಪ್ನಿಂದ ಉಂಟಾಗುವ ಯಾವುದೇ ಪ್ರತಿಕೂಲ ಘಟನೆಗಳು ಅಥವಾ ಶಂಕಿತ ವಿಷತ್ವ ಅಥವಾ ಸಾವು, ಹಾಗೆಯೇ ಮಕ್ಕಳಲ್ಲಿ ಅಥವಾ ಸಮುದಾಯದಲ್ಲಿ ಕೆಮ್ಮಿನ ಅಸಾಮಾನ್ಯ ಹೆಚ್ಚಳವನ್ನು ತಕ್ಷಣವೇ ತನಿಖೆ ಮಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ ವಿಭಾಗದ ಐಎಚ್ಐಪಿ ಪೋರ್ಟಲ್ನಲ್ಲಿ ವರದಿ ಮಾಡಬೇಕು ಎಂದು ಸೂಚಿಸಿದೆ.







